ಎಫ್‍ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಕೋಚಿಂಗ್ ಸೆಂಟರ್ ಮಾಲಕ ಸೆರೆ

ಬೆಂಗಳೂರು, ಫೆ.17: ಪ್ರಥಮದರ್ಜೆ ಸಹಾಯಕ(ಎಫ್‍ಡಿಎ) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧ ತನಿಖೆ ಮುಂದುವರಿಸಿರುವ ಸಿಸಿಬಿ ಪೊಲೀಸರು, ಸ್ಮರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ಮಾಲಕನೋರ್ವನನ್ನು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಸಂಗನಕೇರಿ ಗ್ರಾಮದ ಶಿವಲಿಂಗ ಪಾಟೀಲ್ ಬಂಧಿತ ಆರೋಪಿಯಾಗಿದ್ದಾನೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಜ್ಞಾನದೀಪ ಕೋಚಿಂಗ್ ಸೆಂಟರ್ ನಡೆಸುತ್ತಿದ್ದ ಆರೋಪಿ ಶಿವಲಿಂಗ ಪಾಟೀಲ್, ಎರಡು ವರ್ಷಗಳ ಹಿಂದೆ ಕೋಚಿಂಗ್ ಸೆಂಟರ್ ಅಲ್ಲಿ ಯಾವುದೇ ಚಟುವಟಿಕೆಗಳು ನಡೆಸದೆ ಸ್ಥಗಿತಗೊಳಿಸಿದ್ದ. ಆದರೆ, ಈತ ಈಗಾಗಲೇ ಬಂಧಿತನಾಗಿರುವ ಆರೋಪಿ ರಾಚಪ್ಪನಿಂದ ಪ್ರಶ್ನೆ ಪತ್ರಿಕೆಗಳನ್ನು ಪಡೆದುಕೊಂಡು ಪರೀಕ್ಷಾ ಅಭ್ಯರ್ಥಿಗಳಿಗೆ ಕೊಡುತ್ತಿದ್ದುದು ವಿಚಾರಣೆಯಿಂದ ಗೊತ್ತಾಗಿದೆ.
ಜ.24ರಂದು ರಾಜ್ಯಾದ್ಯಂತ ಎಫ್‍ಡಿಎ ಪರೀಕ್ಷೆ ನಿಗದಿಯಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಸಂಬಂಧ ಕೊನೆ ಗಳಿಗೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡಿದ್ದ ಸಿಸಿಬಿ ಪೊಲೀಸರು ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕಿ ಆರೋಪಿಗಳನ್ನು ಬಂಧಿಸಿದ್ದಾರೆ.
ಒಟ್ಟಾರೆ ಇದುವರೆಗೂ 26 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.





