ಫೇಸ್ ಬುಕ್ ನಲ್ಲಿ ವೈರಲ್ ಆದ ‘ಹಾರುವ ದೋಸೆ’

ಮುಂಬೈ: ಮುಂಬೈ ದೋಸ ಮಾರಾಟಗಾರನೊಬ್ಬ ದಕ್ಷಿಣ ಭಾರತದ ಖಾದ್ಯ ವನ್ನು ಪೂರೈಸುವ ವಿಶಿಷ್ಟ ವಿಧಾನದ ವೀಡಿಯೊವು ಫೇಸ್ ಬುಕ್ ನಲ್ಲಿ 84 ದಶಲಕ್ಷ ವೀಕ್ಷಕರನ್ನು ಗಳಿಸಿದೆ.
ದಕ್ಷಿಣ ಮುಂಬೈನ ಮಂಗಳ್ ದಾಸ್ ಮಾರುಕಟ್ಟೆಯಲ್ಲಿರುವ ಶ‍್ರೀ ಬಾಲಾಜಿ ದೋಸ ಕ್ಯಾಂಟೀನಿನ ದೋಸೆ ತಯಾರಕನ ಕೈ ಚಳಕದಿಂದ ದೋಸೆಗಳು ಕಾವಲಿಯಿಂದ ಮೇಲಕ್ಕೆ ಗಾಳಿಯಲ್ಲಿ ಹಾರಿ ಸೀದಾ ತಟ್ಟೆ ಗೆ ಬೀಳುತ್ತವೆ.
ಸ್ಟ್ರೀಟ್ ಫುಡ್ ರೆಸಿಪೀಸ್ ಎಂಬ ಫೇಸ್ ಬುಕ್ ಪುಟದಲ್ಲಿ ಹಂಚಿಕೊಂಡಿರುವ ವೀಡಿಯೊವೊಂದರಲ್ಲಿ ದೋಸೆ ಮಾರಾಟಗಾರ ಪರಿಣತಿಯಿಂದ ದೋಸೆ ಸಿದ್ಧಪಡಿಸುತ್ತಾನೆ. ಅವುಗಳನ್ನು ಗಾಳಿಯಲ್ಲಿ ಹಾರಿಸಿ ಸೀದಾ ತಟ್ಟೆಗೆ ತಲುಪಿಸುತ್ತಾನೆ. ಈ ಸ್ಟಂಟ್ ನ್ನು ಸುಲಭವಾಗಿ ನಡೆಸಲಾಗುತ್ತದೆ. ಈ ದೃಶ್ಯ ಎಲ್ಲರಿಗೂ ಆಶ್ಚರ್ಯಪಡುವಂತೆ ಮಾಡುತ್ತದೆ.
ಈ ವೀಡಿಯೊವನ್ನು ಕಳೆದ ವಾರ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದಾಗಿನಿಂದ 84.4 ಮಿಲಿಯನ್ ಜನರು ವೀಕ್ಷಿಸಿದ್ದು, 1.3 ಮಿಲಿಯನ್ ಗಿಂತಲೂ ಅಧಿಕ ಜನರು ಲೈಕ್ ಮಾಡಿದ್ದಾರೆ. ಜೊತೆಗೆ ಸಾವಿರಾರು ಉತ್ತಮ ಕಮೆಂಟ್ ಗಳು ಬಂದಿವೆ.
ಕೆಲವರು ದೋಸೆ ಮಾರಾಟಗಾರನನ್ನು ಟೀಕಿಸಿದ್ದಾರೆ. ದೋಸೆಯನ್ನು ಮೇಲಕ್ಕೆ ಎಸೆದು ಆಹಾರಕ್ಕೆ ಅಗೌರವ ತೋರಲಾಗುತ್ತಿದೆ ಎಂದು ಕೆಲವರು ಬರೆದರೆ, ದೋಸೆಯನ್ನು ಮೇಲಕ್ಕೆ ಎಸೆಯುವ ಉದ್ದೇಶವೇನು? ಇದರಲ್ಲಿ ನಿಜವಾಗಿಯೂ ಯಾವುದೇ ಅರ್ಥವಿಲ್ಲ ಎಂದು ವೀಕ್ಷಕನೊಬ್ಬ ಟೀಕಿಸಿದ್ದಾನೆ.
ಆಹಾರದೊಂದಿಗೆ ಆಟ.. ಇದೊಂದು ಕೆಟ್ಟ ಸಾಹಸ’ ಎಂದು ಇನ್ನೊಬ್ಬ ಟೀಕಿಸಿದ್ದಾನೆ.







