ತಂದೆಯ ಹಂತಕರನ್ನು ಕ್ಷಮಿಸುವೆ: ರಾಹುಲ್ ಗಾಂಧಿ

ಪುದುಚೇರಿ: 1991ರಲ್ಲಿ ತಂದೆ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿದ್ದಾಗ ನನಗೆ ಅತೀವ ನೋವಾಗಿತ್ತು. ಅದಕ್ಕೆ ಕಾರಣರಾದವರ ವಿರುದ್ದ ಯಾವುದೇ ಕೋಪ ಅಥವಾ ದ್ವೇಷವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ.
ಪುದುಚೇರಿಯ ಸರಕಾರಿ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಜತೆ ರಾಹುಲ್ ಸಂವಾದ ನಡೆಸಿದರು. ಈ ವೇಳೆ ವಿದ್ಯಾರ್ಥಿನಿಯೊಬ್ಬರು “ನಿಮ್ಮ ತಂದೆಯವರನ್ನು ಎಲ್ ಟಿಟಿಇ ಉಗ್ರರು ಹತ್ಯೆ ಮಾಡಿದ್ದರು. ಅವರ ನಿಮಗೆ ನಿಮ್ಮ ಭಾವನೆ ಏನು? ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, ಹಿಂಸಾಚಾರದಿಂದ ಏನನ್ನೂ ಕಸಿದುಕೊಳ್ಳಲು ಸಾಧ‍್ಯವಿಲ್ಲ. ನನ್ನ ತಂದೆ ನನ್ನಲ್ಲಿ ಜೀವಂತವಾಗಿದ್ದಾರೆ ಎಂದರು.
ನನಗೆ ಯಾರ ವಿರುದ್ಧವೂ ಕೋಪ ಅಥವಾ ದ್ವೇಷವಿಲ್ಲ. ನಾನು ನನ್ನ ತಂದೆಯನ್ನು ಕಳೆದುಕೊಂಡಿದ್ದೆ. ನನಗೆ ಅದು ತುಂಬಾ ಕಷ್ಟದ ಸಮಯವಾಗಿತ್ತು. ವಿಪರೀತ ನೋವಾಗಿತ್ತು. ತಪ್ಪಿತಸ್ಥರನ್ನು ಕ್ಷಮಿಸುತ್ತೇನೆ ಎಂದು ರಾಹುಲ್ ಹೇಳಿದರು.
ಚೆನ್ನೈ ಸಮೀಪದ ಶ್ರೀಪೆರಂಬೂದೂರ್ ನಲ್ಲಿ 1991ರ ಮೇ 21ರಂದು ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿದ್ದ ರಾಜೀವ್ ಗಾಂಧಿಯವರನ್ನು ಮಹಿಳಾ ಆತ್ಮಾಹುತಿ ಬಾಂಬರ್ ಮೂಲಕ ಎಲ್ ಟಿಟಿಇ ಉಗ್ರರು ಹತ್ಯೆ ಮಾಡಿದ್ದರು.





