ಅರಮನೆ ಮೈದಾನದ ಜಾಗ ಸರಕಾರದ ಸ್ವಾಧೀನದಲ್ಲಿದೆ: ಹೈಕೋರ್ಟ್ ಗೆ ಸರಕಾರದ ಹೇಳಿಕೆ
ಬೆಂಗಳೂರು, ಫೆ.17: ಬಳ್ಳಾರಿ ರಸ್ತೆಯ ಮೇಕ್ರಿ ವೃತ್ತದಿಂದ ಕಂಟೋನ್ಮೆಂಟ್ ರೈಲು ನಿಲ್ದಾಣ ನಡುವಿನ ರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ ಸಲ್ಲಿಸಿದ್ದ ಅರ್ಜಿ ಸಂಬಂಧ ರಾಜ್ಯ ಸರಕಾರ ಅರಮನೆ ಮೈದಾನ ಸರಕಾರಕ್ಕೆ ಸ್ವಾಧೀನವಾಗಿದೆ ಎಂದು ಹೈಕೋರ್ಟ್‍ಗೆ ತಿಳಿಸಿದೆ.
ನಗರದ ಸಮರ್ಪಣಾ ಸಾಮಾಜಿಕ-ಸಾಂಸ್ಕೃತಿಕ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ರಾಜಮನೆತನದವರಿಗೆ ಟಿಡಿಆರ್(ಅಭಿವೃದ್ಧಿ ಹಕ್ಕು) ನೀಡಲು ಸಾಧ್ಯವಿಲ್ಲ, ಅರಮನೆ ಮೈದಾನ ಸರಕಾರಕ್ಕೆ ಸ್ವಾಧೀನವಾಗಿದೆ. ಹೀಗಾಗಿ, ಅರಮನೆ ಮೈದಾನದ ಜಾಗಕ್ಕೆ ಸರಕಾರವೆ ಮಾಲಕ. ಮಾಲಕತ್ವ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂ ಕೋರ್ಟ್ ಮುಂದಿದೆ. ಅರಮನೆ ಮೈದಾನ ಸ್ವಾಧೀನಕ್ಕೆ ಸುಪ್ರೀಂ ತಡೆ ನೀಡಿಲ್ಲ. ಟಿಡಿಆರ್ ಯಾರಿಗೆ ನೀಡಬೇಕೆಂಬ ಬಗ್ಗೆ ಗೊಂದಲವಿದೆ. ಸುಪ್ರೀಂ ಕೋರ್ಟ್‍ನಿಂದ ಸ್ಪಷ್ಟನೆ ಕೋರಲು ಚಿಂತಿಸಲಾಗಿದೆ. ಸದ್ಯದಲ್ಲಿಯೇ ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ನಿರ್ಧಾರವಾಗಲಿದೆ ಎಂದು ಹೈಕೋರ್ಟ್‍ಗೆ ಎಜಿ ಪ್ರಭುಲಿಂಗ್ ನಾವದಗಿ ಹೇಳಿಕೆ ನೀಡಿದರು. ಎಜಿ ಹೇಳಿಕೆ ಹಿನ್ನೆಲೆ ವಿಚಾರಣೆಯನ್ನು ಮುಂದೂಡಲಾಯಿತು.
ಅರಮನೆ ಮೈದಾನದ ವಿವಾದ: ಮೈಸೂರು ರಾಜಮನೆತನ ಮತ್ತು ಕರ್ನಾಟಕ ಸರಕಾರದ ನಡುವೆ ಅರಮನೆ ಮೈದಾನದ 454 ಎಕರೆ ಭೂಮಿಯ ವಿವಾದದ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. 2014ರಲ್ಲಿ ಸರಕಾರ ಸಾರ್ವಜನಿಕ ಹಿತದೃಷ್ಟಿಯಿಂದ ರಸ್ತೆ ಅಗಲೀಕರಣ ಅನಿವಾರ್ಯ ಎಂದು ಕೋರ್ಟ್ ಗೆ ಹೇಳಿತ್ತು.
ಆಗ ಸುಪ್ರೀಂಕೋರ್ಟ್ ವಿವಾದದ ವಿಚಾರಣೆ ಬಾಕಿ ಇದ್ದರೂ ರಸ್ತೆಯನ್ನು ವಿಸ್ತರಣೆ ಮಾಡಬಹುದು ಎಂದು ಆದೇಶ ನೀಡಿತ್ತು.





