ಫೆ.20 ‘ಅವನು ಹೆಣ್ಣಾಗಬೇಕು‘ ಕೃತಿ ಬಿಡುಗಡೆ
ಉಡುಪಿ, ಫೆ.17: ಸಾಹಿತಿ, ಕವಯಿತ್ರಿ ಹಾಗೂ ಉಪನ್ಯಾಸಕಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ಕವನ ಸಂಕಲನ ‘ಅವನು ಹೆಣ್ಣಾಗಬೇಕು’ ಕೃತಿ ಬಿಡುಗಡೆ ಸಮಾರಂಭ ಫೆ. 20ರಂದು ನಡೆಯಲಿದೆ.
ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ವತಿಯಿಂದ ಉಡುಪಿ ಎಂಜಿ ಎಂ ಕಾಲೇಜು ಸಹಯೋಗದೊಂದಿಗೆ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ಫೆ.20ರ ಸಂಜೆ 5 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಕನ್ನಡದ ಹಿರಿಯ ನಾಟಕಕಾರ, ನಟ, ನಿರ್ದೇಶಕ ಎಸ್. ಎನ್. ಸೇತುರಾಂ ಕೃತಿ ಬಿಡುಗಡೆ ಮಾಡಲಿದ್ದಾರೆ.
ಚಲನಚಿತ್ರ ಹಾಗೂ ನಾಟಕ ನಿರ್ದೇಶಕ ಕಾಸರಗೋಡು ಚಿನ್ನಾ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಸುಧಾ ಆಡುಕಳ ಕೃತಿ ವಿಮರ್ಶೆ ಮಾಡಲಿದ್ದು, ಅತಿಥಿಗಳಾಗಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ನಾಯ್ಕ್, ಎಂಯುಪಿ ಪ್ರಧಾನ ಸಂಪಾದಕಿ ಪ್ರೊ. ನೀತಾ ಇನಾಂದಾರ್, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ್ ಶೆಣೈ, ಅಧ್ಯಕ್ಷ ಪ್ರೊ. ಶಂಕರ್ ಉಪಸ್ಥಿತರಿರುವರು.
ಪ್ರಾರಂಭದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಕಲಾವಿದರು ಅಭಿನಯಿಸುವ ಬೀದಿ ನಾಟಕ ‘ಆರೋಗ್ಯ ಭಾರತ’ ಪ್ರದರ್ಶನಗೊಳ್ಳಲಿದೆ ಎಂದು ಪ್ರತಿಷ್ಠಾನ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ





