ರಂಗಭೂಮಿ ಕಲಾವಿದರಿಗೆ ಉಚಿತ ಯಕ್ಷಗಾನ ಕಮ್ಮಟ
ಉಡುಪಿ, ಫೆ.17: ಇಂದ್ರಾಳಿ ಶಿವಪ್ರಭಾ ಯಕ್ಷಗಾನ ಕೇಂದ್ರದ 50 ಸಾರ್ಥಕ ವರ್ಷ ಪೂರೈಸಿರುವ ಸಂದರ್ಭದಲ್ಲಿ ಅರ್ಥಪೂರ್ಣವಾಗಿ ಆಚರಿ ಸುವ ಉದ್ದೇಶ ದಿಂದ ರಾಷ್ಟ್ರಮಟ್ಟದ ರಂಗಭೂಮಿ ಕಲಾವಿದರು ಮತ್ತು ರಂಗಕರ್ಮಿಗಳಿಗೆ ಯಕ್ಷ ಗುರು ಬನ್ನಂಜೆ ಸಂಜೀವ ಸುವರ್ಣ ನೇತೃತ್ವ ದಲ್ಲಿ ಉಚಿತ ಯಕ್ಷಗಾನ ಕಮ್ಮಟವನ್ನು ಆಯೋಜಿಸಲಾಗಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರದ ಟ್ರಸ್ಟಿ ಡಾ.ಪಿ.ಎಲ್.ಎನ್.ರಾವ್, ಈ ಉಚಿತ ಶಿಬಿರದ ಮಾಹಿತಿ ಪಡೆದ ದೇಶದ ವಿವಿಧ ರಾಜ್ಯಗಳ ರಂಗಕರ್ಮಿಗಳು 300ಕ್ಕೂ ಅಧಿಕ ಅರ್ಜಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಈ ಪೈಕಿ ದೆಹಲಿ, ಮಹಾರಾಷ್ಟ್ರ, ಜೈಪುರ, ಉತ್ತರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ 18 ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಇಂದ್ರಾಳಿ ಯಕ್ಷಗಾನ ಕೇಂದ್ರದಲ್ಲಿ ಫೆ.20ರಿಂದ ಮಾ.10ರವರೆಗೆ ನಿರಂತರ 20 ದಿನಗ ಕಾಲ ಈ ಶಿಬಿರ ನಡೆಯಲಿದೆ ಎಂದರು.
ಬಡಗುತಿಟ್ಟು ಯಕ್ಷಗಾನವನ್ನೇ ಪ್ರಧಾನವಾಗಿಟ್ಟುಕೊಂಡು ಈ ತರಬೇತಿ ನೀಡಲಾಗುವುದು. ತೆಂಕುತಿಟ್ಟು ಯಕ್ಷಗಾನದ ವೇಷಗಾರಿಕೆ ಹೆಜ್ಜೆಯ ಕುರಿತು ಒಂದು ದಿನದ ಕಾರ್ಯಾಗಾರ ನಡೆಸಲಾಗುವುದು. ದೇಶದ ಮೂಲೆ ಮೂಲೆ ಯಿಂದ ಬರುವ ಶಿಬಿರಾರ್ಥಿಗಳಿಗೆ ಕರಾವಳಿಯ ಸಂಸ್ಕೃತಿ ಯನ್ನು ಪರಿಚಯಿಸುವ ಉದ್ದೇಶವನ್ನು ಕೂಡ ಹೊಂದಲಾಗಿದೆ.
ವೇಷಭೂಷಣ, ಮುಖವರ್ಣಿಕೆ ಬಗ್ಗೆ ಕಮ್ಮಟ ನಡೆಯಲಿದೆ. ಕಲಾವಿದನ ಬದುಕು, ಜೀವನ ಕಟ್ಟಿಕೊಳ್ಳುವ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಆಯೋಜಿಸಲಾಗುವುದು. ಶಿಬಿರಾರ್ಥಿಗಳಿಗೆ ಊಟ ವಸತಿ 20 ದಿನದ ಓಡಾಟದ ಎಲ್ಲಾ ಖರ್ಚನ್ನು ಯಕ್ಷಗಾನ ಕೇಂದ್ರವೇ ಭರಿಸ ಲಿದೆ. ಕಾರ್ಯಕ್ರಮ ಫೆ.21ರಂದು ಸಂಜೆ 6ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಮಾ.9 ಮತ್ತು 10 ರಂದು ಕಲಾ ಪ್ರದರ್ಶನಗಳು ನಡೆಯಲಿವೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೇಂದ್ರದ ಪ್ರಾಂಶುಪಾಲ ಬನ್ನಂಜೆ ಸಂಜೀವ ಸುವರ್ಣ, ಆಡಳಿತಾಧಿಕಾರಿ ಜಗದೀಶ್ ಶೆಟ್ಟಿ, ಗುರುಗಳಾದ ಕೃಷ್ಣಮೂರ್ತಿ ಭಟ್, ಶೈಲೇಶ್ ನಾಯ್ಕ್ ಉಪಸ್ಥಿತರಿದ್ದರು.







