ಶೋಧ ವಾರಂಟ್ ಇಲ್ಲದೆ ಮನೆಯಿಂದ ಹಾರ್ಡ್ ಡಿಸ್ಕ್ ವಶಪಡಿಸಿಕೊಂಡ ದಿಲ್ಲಿ ಪೊಲೀಸ್: ಶಂತನು ಮುಲುಕ್ ತಂದೆ ಆರೋಪ

ಶಂತನು ಮುಲುಕ್
ಮುಂಬೈ, ಫೆ. 17: ರೈತರ ಪ್ರತಿಭಟನೆಗೆ ಸಂಬಂಧಿಸಿದ ‘ಟೂಲ್ಕಿಟ್’ ಪ್ರಕರಣದಲ್ಲಿ ಆರೋಪಿಯಾಗಿರುವ ಪರಿಸರ ಹೋರಾಟಗಾರ ಶಂತನು ಮುಲುಕ್ ಅವರ ಮಹಾರಾಷ್ಟ್ರದ ಬೀಡ್ನಲ್ಲಿರುವ ಮನೆಗೆ ಶೋಧ ವಾರಂಟ್ ರಹಿತವಾಗಿ ಆಗಮಿಸಿದ್ದ ದಿಲ್ಲಿ ಪೊಲೀಸ್ ಸಿಬ್ಬಂದಿ ಎಂದು ಹೇಳಿಕೊಂಡ ಇಬ್ಬರು ವ್ಯಕ್ತಿಗಳು ಕಂಪ್ಯೂಟರ್ ಹಾರ್ಡ್ ಡಿಸ್ಕ್ ಹಾಗೂ ಇತರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಶಂತನು ಅವರ ತಂದೆ ಶಿವಲಾಲ್ ಮುಲುಕ್ ಸ್ಥಳೀಯ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಬಗ್ಗೆ ಶಿವಲಾಲ್ ಮುಲುಕ್ ಅವರು ಪೊಲೀಸರಿಗೆ ಮಂಗಳವಾರ ದೂರು ನೀಡಿದ್ದಾರೆ ಎಂದು ಬೀಡ್ನ ಪೊಲೀಸ್ ಅಧೀಕ್ಷಕ ರಾಜಾ ರಾಮಸ್ವಾಮಿ ಹೇಳಿದ್ದಾರೆ. ‘‘ನಾವು ನಿನ್ನೆ ದೂರು ಸ್ವೀಕರಿಸಿದೆವು. ವಿಚಾರಣೆ ನಡೆಸಲಿದ್ದೇವೆ ಹಾಗೂ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಿದ್ದೇವೆ’’ ಎಂದು ರಾಜಾ ರಾಮಸ್ವಾಮಿ ತಿಳಿಸಿದ್ದಾರೆ. ಓರ್ವ ಜವಾಬ್ದಾರಿಯುತ ನಾಗರಿಕರಾಗಿ 54ರ ಹರೆಯದ ಶಿವಲಾಲ್ ಮುಲಕ್ ಬೀಡ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೆ, ತನ್ನ ಮನೆಯಲ್ಲಿ ನಡೆಸಿದ ಶೋಧಕ್ಕೆ ಸಂಬಂಧಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸ್ ಅಧೀಕ್ಷಕರಲ್ಲಿ ಮನವಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೀಡ್ನ ಚಾಣಕ್ಯಪುರಿ ಪ್ರದೇಶದಲ್ಲಿರುವ ಮುಲುಕ್ನ ನಿವಾಸಕ್ಕೆ ಇಬ್ಬರು ವ್ಯಕ್ತಿಗಳು ಫೆಬ್ರವರಿ 12ರಂದು ಬೆಳಗ್ಗೆ 5.30ಕ್ಕೆ ಆಗಮಿಸಿದ್ದರು. ಅವರು ಗುರುತು ಪತ್ರ ತೋರಿಸಿ ತಮ್ಮನ್ನು ದಿಲ್ಲಿ ಪೊಲೀಸ್ ಅಧಿಕಾರಿಗಳು ಎಂದು ಪರಿಚಯಿಸಿಕೊಂಡರು ಎಂದು ದೂರಿನಲ್ಲಿ ಹೇಳಲಾಗಿದೆ.
ಶಂತನು ಬಗ್ಗೆ ತಿಳಿದುಕೊಳ್ಳಲು ಬಯಸುತ್ತೇವೆ. ಆತ ದೇಶದ್ರೋಹ ಎಸಗಿದ್ದಾನೆ. ಆತನಿಗೆ ಖಲಿಸ್ತಾನ ಪರ ಜನರೊಂದಿಗೆ ಸಂಪರ್ಕ ಇದೆ ಎಂದು ಅವರಿಬ್ಬರು ಮುಲುಕ್ ಕುಟುಂಬಕ್ಕೆ ತಿಳಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅವರಿಬ್ಬರು ಮನೆಯ ಎಲ್ಲ ಕೊಠಡಿಗಳಲ್ಲಿ ಶೋಧ ಕಾರ್ಯ ನಡೆಸಿದರು. ಅವರು ಶಂತನು ಮುಲುಕ್ ಅವರ ಕೊಠಡಿಯಿಂದ ಹಾರ್ಡ್ ಡಿಸ್ಕ್, ಪರಿಸರಕ್ಕೆ ಸಂಬಂಧಿಸಿದ ಪೋಸ್ಟರ್, ಪುಸ್ತಕ ಹಾಗೂ ಮೊಬೈಲ್ ಕವರ್ ಅನ್ನು ಕೊಂಡೊಯ್ದರು ಎಂದು ಹೇಳಲಾಗಿದೆ. ಪೊಲೀಸ್ ಅಧಿಕಾರಿಗಳು ಯಾವುದೇ ರೀತಿಯ ಶೋಧ ವಾರಂಟ್ ಅನ್ನು ತೋರಿಸಿಲ್ಲ. ಅಲ್ಲದೆ ಈ ವಸ್ತುಗಳನ್ನು ತೆಗೆದುಕೊಂಡು ಹೋಗುವ ಮುನ್ನ ಕುಟುಂಬದಿಂದ ಯಾವುದೇ ಅನುಮತಿ ಪಡೆದಿಲ್ಲ ಎಂದು ಶಿವಲಾಲ್ ಮುಲುಕ್ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.







