ಫೆ 18ರಿಂದ ಮಂಗಳೂರಿನಲ್ಲಿ ಅರೆಹೊಳೆ ನಾಟಕೋತ್ಸವ
ಮಂಗಳೂರು, ಫೆ.17: ಅರೆಹೊಳೆ ಪ್ರತಿಷ್ಠಾನವು ಅಸ್ವಿತ್ವ(ರಿ) ಹಾಗೂ ಪಾದುವಾ ರಂಗ ಅಧ್ಯಯನ ಕೇಂದ್ರಗಳ ಸಹಯೋಗದೊಂದಿಗೆ ಫೆ.18ರಿಂದ 22ರವರೆಗೆ ನಗರದ ಪಾದುವಾ ಕಾಲೇಜಿನಲ್ಲಿ ಆರನೆಯ ರಾಜ್ಯ ಮಟ್ಟದ ದ್ವಿಭಾಷಾ ನಾಟಕೋತ್ಸವ, ಅರೆಹೊಳೆ ನಾಟಕೋತ್ಸವ ನಡೆಯಲಿದೆ. ಹಿರಿಯ ಚಾರ್ಟರ್ಡ್ ಅಕೌಂಟೆಂಟ್ ಸಿಎ ನಾಯಕ್ ನಾಟಕೋತ್ಸವ ಉದ್ಘಾಟಿಸಲಿದ್ದಾರೆ.
ಪ್ರತೀ ದಿನದ ನಾಟಕೋತ್ಸವದಲ್ಲಿ ಯುವ ರಂಗ ಕರ್ಮಿಗಳನ್ನು ಸನ್ಮಾನಿಸಲಾಗುತ್ತಿದೆ. ಮೊದಲ ದಿನ ಅರೆಹೊಳೆ ರಂಗಭೂಮಿ ಪ್ರಶಸ್ತಿಯನ್ನು ಬೆಂಗಳೂರಿನ ರಂಗ ಕರ್ಮಿ ರಾಜ್ ಗುರು ಹೊಸಕೋಟೆಗೆ ಪ್ರದಾನಿಸಲಾಗುವುದು. ನಂತರದ ನಾಲ್ಕೂ ದಿನಗಳಲ್ಲಿ ಅನುಕ್ರಮವಾಗಿ ಯುವ ನೃತ್ಯ, ರಂಗಭೂಮಿ ಕಲಾವಿದೆ ಮಂಗಳೂರಿನ ಪ್ರಥ್ವಿ ಎಸ್.ರಾವ್,ಉಡುಪಿಯ ಯುವ ರಂಗ ನಿರ್ದೇಶಕ ಪ್ರಶಾಂತ್ ಉದ್ಯಾವರ್, ಕೊಂಕಣಿ ಕನ್ನಡ ತುಳು ನಾಟಕ ಕಲಾವಿದ ಮಂಗಳೂರಿನ ಕ್ಲೆನ್‌ವಿನ್ ಫೆರ್ನಾಂಡಿಸ್ ಹಾಗೂ ಚಚಲಚಿತ್ರ, ರಂಗಭೂಮಿ ಕಲಾವಿದ ಮಂಗಳೂರಿನ ವಿಜಯ ಮಯ್ಯ ಐಲ ಅವರನ್ನು ಸನ್ಮಾನಿಸಲಾಗುವುದು.
ಪ್ರತೀ ದಿನ ಸಂಜೆ 6:30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, 18ರಂದು ಬೆಂಗಳೂರಿನ ರಂಗ ಪಯಣ ತಂಡದಿಂದ ಶ್ರದ್ಧಾ, 19ರಂದು ಪುತ್ತೂರಿನ ಸೌಗಂಧಿಕಾ ರಂಗ ತಂಡದಿಂದ ಲಿಂಗ್ ದ ಡೆಡ್, 20ರಂದು ಮಂದಾರ (ರಿ) ಬ್ರಹ್ಮಾವರ ತಂಡದಿಂದ ಕೊಳ್ಳಿ, 21ರಂದು ಲೋಗೋಸ್ ಥಿಯೇಟರ್ ಟ್ರೂಪ್‌ನಿಂದ ಗೀತ್ (ಕೊಂಕಣಿ ನಾಟಕ) ಹಾಗೂ 22ರಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಭಾವನಾ ಕೆರೆಮಠ ಅವರಿಂದ ಏಕವ್ಯಕ್ತಿ ನಾಟಕ ಅಹಲ್ಯಾ ಪ್ರದರ್ಶನಗೊಳ್ಳಲಿದೆ. ಪ್ರವೇಶ ಉಚಿತವಾಗಿರುತ್ತದೆ.
ಅರೆಹೊಳೆ ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಹಾಗೂ ಗೌರವ ಸಲಹೆಗಾರ ಕೆ ಸಿ ಪ್ರಭು ಅವರ ಉಪಸ್ಥಿತಿಯಲ್ಲಿ ನಾಟಕೋತ್ಸವ ನಡೆಯಲಿದೆ. ಸಮಾರೋಪದ ದಿನ ಅರೆಹೊಳೆ ಪ್ರತಿಷಾನ ವೆಬ್‌ಸೈಟ್ ಅನಾವರಣಗೊಳ್ಳಿದೆ ಎಂದು ಪ್ರಕಟನೆ ತಿಳಿಸಿದೆ.







