‘ಗೋ ವಿಜ್ಞಾನ ಪರೀಕ್ಷೆ’ ಬರೆಯಲು ವಿದ್ಯಾರ್ಥಿಗಳನ್ನು ಉತ್ತೇಜಿಸುವಂತೆ ವಿ.ವಿ.ಗಳಿಗೆ ಸೂಚಿಸಿದ ಯುಜಿಸಿ

ಹೊಸದಿಲ್ಲಿ, ಫೆ. 17: ‘ಗೋ ವಿಜ್ಞಾನ’ದ ಕುರಿತ ಜ್ಞಾನ ಪರೀಕ್ಷಿಸಲು ಆನ್‌ಲೈನ್ ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿಗಳನ್ನು ಉತ್ತೇಜಿಸುವಂತೆ ದೇಶಾದ್ಯಂತದ ವಿಶ್ವವಿದ್ಯಾನಿಲಯಗಳ ಉಪ ಕುಲಪತಿಗಳಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೆಬ್ರವರಿ 25ರಂದು ನಡೆಯಲಿರುವ ‘ಕಾಮಧೇನು ಗೋ ವಿಜ್ಞಾನ ಪ್ರಚಾರ-ಪ್ರಸಾರ ಪರೀಕ್ಷೆ’ಗೆ ನೋಂದಣಿ ಶುಲ್ಕ ಇಲ್ಲ. ರಾಷ್ಟ್ರೀಯ ಕಾಮಧೇನು ಆಯೋಗ (ಆರ್‌ಕೆಎ)ಆಯೋಜಿಸುವ ಈ ಪರೀಕ್ಷೆಯನ್ನು ಪ್ರಾಥಮಿಕ, ಪ್ರೌಢ ಹಾಗೂ ಸೀನಿಯರ್ ಸೆಕೆಂಡರಿ ಶಾಲೆಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಬರೆಯಬಹುದು ಎಂದು ಅವರು ಹೇಳಿದ್ದಾರೆ.
ಇದಕ್ಕೆ (ಗೋ ವಿಜ್ಞಾನ ಪರೀಕ್ಷೆ) ವ್ಯಾಪಕ ಪ್ರಚಾರ ನೀಡುವಂತೆ ಹಾಗೂ ವಿದ್ಯಾರ್ಥಿಗಳು ಈ ಪರೀಕ್ಷೆಗೆ ನೋಂದಣಿ ಮಾಡಲು ಉತ್ತೇಜನ ನೀಡುವಂತೆ ಮನವಿ ಮಾಡಿ ನಾನು ಈ ಪತ್ರ ಬರೆದಿದ್ದೇನೆ. ನಿಮ್ಮ ವಿಶ್ವವಿದ್ಯಾನಿಲಯದ ಮಾನ್ಯತೆ ಪಡೆದ ಕಾಲೇಜುಗಳ ಗಮನಕ್ಕೆ ಈ ವಿಷಯ ತರಬೇಕು ಎಂದು ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ (ಯುಜಿಸಿ)ದ ಕಾರ್ಯದರ್ಶಿ ರಜನೀಶ್ ಜೈನ್ ಉಪ ಕುಲಪತಿಗಳಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ. ಪರೀಕ್ಷೆಯನ್ನು ಇಂಗ್ಲೀಷ್, ಹಿಂದಿ, ಗುಜರಾತಿ, ಸಂಸ್ಕೃತ, ಪಂಜಾಬಿ, ಮರಾಠಿ, ಕನ್ನಡ, ಮಲಯಾಳಂ, ತಮಿಳು, ತೆಲುಗು ಹಾಗೂ ಒಡಿಯಾ ಭಾಷೆಗಳಲ್ಲಿ ಆಯೋಜಿಸಲಾಗುವುದು. ಒಂದು ಗಂಟೆಯ ಆಯ್ಕೆ ಪ್ರಶ್ನೆಗಳನ್ನು ಆಧರಿಸಿದ ಈ ಪರೀಕ್ಷೆಯನ್ನು ವಿದ್ಯಾರ್ಥಿಗಳಲ್ಲದೆ ಸಾರ್ವಜನಿಕರು ಕೂಡ ಬರೆಯಬಹುದು ಎಂದು ಅವರು ಹೇಳಿದ್ದಾರೆ.
ಗೋವುಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಕೇಂದ್ರ ಸರಕಾರ ಈ ರಾಷ್ಟ್ರೀಯ ಕಾಮಧೇನು ಆಯೋಗ (ಆರ್‌ಕೆಎ)ವನ್ನು ರೂಪಿಸಿದೆ.







