ಎಸ್ಸಿ-ಎಸ್ಟಿ ಆಯೋಗದ ಅಧ್ಯಕ್ಷರಾಗಿ ನೆಹರು ಓಲೆಕಾರ್ ನೇಮಕ: ಮೂಲ ದಾಖಲೆ ಒದಗಿಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು, ಫೆ.17: ರಾಜ್ಯ ಎಸ್ಸಿ-ಎಸ್ಟಿ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಶಾಸಕ ನೆಹರು ಓಲೇಕಾರ್ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ನೇಮಕಕ್ಕೆ ಸಂಬಂಧಿಸಿದ ಮೂಲ ದಾಖಲೆ ಒದಗಿಸುವಂತೆ ಸರಕಾರಕ್ಕೆ ನಿರ್ದೇಶಿಸಿದೆ.
ಓಲೇಕಾರ್ ನೇಮಕ ಪ್ರಶ್ನಿಸಿ ಕೆ.ಸಿ ರಾಜಣ್ಣ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ ಸರಕಾರದ ಪರ ವಕೀಲರು, ನೆಹರು ಓಲೇಕಾರ್ ಅವರ ನೇಮಕಾತಿ ಕಾನೂನು ಪ್ರಕಾರವೇ ಇದೆ. 2007ರ ಫೆ.5ರಿಂದ 2012ರ ಡಿ.28ರವರೆಗೆ ಎಸ್ಸಿ-ಎಸ್ಟಿ ಆಯೋಗದ ಅಧ್ಯಕ್ಷರಾಗಿ ನಾಮ ನಿರ್ದೇಶನಗೊಂಡು ಸೇವೆ ಸಲ್ಲಿಸಿದ್ದಾರೆ. ಹಿಂದಿನ ಸೇವೆ ಪರಿಗಣಿಸಿ 2020ರ ನ.27ರಂದು ಮತ್ತೆ ಆಯೋಗದ ಅಧ್ಯಕ್ಷರ ಹುದ್ದೆಗೆ ಅವರನ್ನು ನೇಮಿಸಲಾಗಿದೆ. ಪರಿಶಿಷ್ಟ ಜಾತಿಗೆ ಸೇರಿದ ಅವರು ಹಾಲಿ ಶಾಸಕರಾಗಿದ್ದು, ಎಸ್ಸಿ-ಎಸ್ಟಿ ಸಮುದಾಯದ ವಿಷಯಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ಹೀಗಾಗಿ, ಅರ್ಜಿದಾರರ ಆಕ್ಷೇಪಣೆಗೆ ಯಾವುದೇ ಆಧಾರ ಇಲ್ಲವಾಗಿದ್ದು, ವಜಾ ಮಾಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.
ಅರ್ಜಿದಾರರ ಪರ ವಾದಿಸಿದ ವಕೀಲ ಎಸ್.ಉಮಾಪತಿ ಅವರು, ಹಿಂದಿನ ಅವಧಿಯಲ್ಲಿ ಓಲೇಕಾರ್ ಅವರು ಆಯೋಗದ ಸಭೆಗಳನ್ನೂ ನಡೆಸಿರಲಿಲ್ಲ. ಇದೇ ವಿಚಾರವಾಗಿ ಹೈಕೋರ್ಟ್ ಈ ಹಿಂದೆ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ಮೇಲಾಗಿ ಆಯೋಗದ ಅಧ್ಯಕ್ಷರಾಗಲು ಅವರಿಗೆ ನಿಗದಿತ ಅರ್ಹತೆ ಇಲ್ಲ ಎಂದು ಪೀಠಕ್ಕೆ ತಿಳಿಸಿದರು.
ಓಲೇಕಾರ್ ಪರ ವಕೀಲರು ಅರ್ಜಿದಾರರ ಆರೋಪಗಳಿಗೆ ಹೆಚ್ಚುವರಿ ಆಕ್ಷೇಪಣೆ ಸಲ್ಲಿಸಲು ಎರಡು ವಾರ ಕಾಲಾವಕಾಶ ನೀಡುವಂತೆ ಪೀಠಕ್ಕೆ ಮನವಿ ಮಾಡಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠ, ನೆಹರು ಓಲೇಕಾರ್ ನೇಮಕಾತಿಗೆ ಸಂಬಂಧಿಸಿದ ಮೂಲ ದಾಖಲಾತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸರಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು.







