ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಿ: ಎಂಸಿಡಿ, ಇಲಾಖೆಗಳಿಗೆ ದಿಲ್ಲಿ ಸರಕಾರ ನಿರ್ದೇಶ

ಹೊಸದಿಲ್ಲಿ, ಫೆ. 17: ತಮ್ಮ ಕಚೇರಿಗಳಲ್ಲಿ ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸುವಂತೆ ದಿಲ್ಲಿ ಸರಕಾರ ತನ್ನ ಎಲ್ಲಾ ಇಲಾಖೆಗಳು, ಜಿಲ್ಲಾ ಪ್ರಾಧಿಕಾರಗಳು, ಮುನ್ಸಿಪಲ್ ಕಾರ್ಪೋರೇಶನ್ ಹಾಗೂ ಸ್ವಾಯತ್ತ ಸಂಸ್ಥೆಗಳಿಗೆ ನಿರ್ದೇಶಿಸಿದೆ.
ಇಂತಹ ಶೌಚಾಲಯಗಳನ್ನು ತತ್‌ಕ್ಷಣ ನಿರ್ಮಾಣ ಮಾಡಲು ಸಾಧ್ಯವಾಗದೇ ಇದ್ದರೆ, ಅಂಗವಿಕಲ ವ್ಯಕ್ತಿಗಳಿಗೆ ಈಗ ಅಸ್ತಿತ್ವದಲ್ಲಿರುವ ಶೌಚಾಲಯ ಸೌಲಭ್ಯವನ್ನು ತತ್ಕಾಲಕ್ಕೆ ತೃತೀಯ ಲಿಂಗಿ ವ್ಯಕ್ತಿಗಳು ಬಳಸಲು ಅವಕಾಶ ನೀಡಬೇಕು ಎಂದು ಆದೇಶದಲ್ಲಿ ದಿಲ್ಲಿ ಸರಕಾರ ಹೇಳಿದೆ.
2021-22ರ ವಾರ್ಷಿಕ ಬಜೆಟ್‌ನಲ್ಲಿ ದಿಲ್ಲಿ ಮುನ್ಸಿಪಲ್ ಕಾರ್ಪೋರೇಶನ್ ರಾಷ್ಟ್ರ ರಾಜಧಾನಿಯಲ್ಲಿ ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಸಾರ್ವಜನಿಕ ಶೌಚಾಲಯ ಒದಗಿಸಲು ನಿರ್ಧರಿಸಿತ್ತು. ತೃತೀಯ ಲಿಂಗಿಗಳಿಗೆ ಶೌಚಾಲಯ ನಿರ್ಮಿಸಲು ಎರಡು ವರ್ಷ ಅಂತಿಮ ಗಡು ವಿಧಿಸಲಾಗಿದೆ. ‘‘ಇಂತಹ ಶೌಚಾಲಯಗಳು ಅಂಗವಿಕಲರನ್ನು ಪ್ರತಿನಿಧಿಸುವ ಸಂಕೇತ ಹಾಗೂ ಅದರೊಂದಿಗೆ ತೃತೀಯ ಲಿಂಗಿಗಳನ್ನು ಪ್ರತಿನಿಧಿಸುವ ಟಿ ಸಂಕೇತವನ್ನು ಪ್ರದರ್ಶಿಸಬೇಕು. ತೃತೀಯ ಲಿಂಗಿಗಳ ತಾವು ಸ್ವಯಂ ಗುರುತಿಸಿದ ಲಿಂಗತ್ವಕ್ಕೆ ಅನುಗುಣವಾಗಿ ಲಿಂಗಾಧರಿತ ಶೌಚಾಲಯಗಳನ್ನು ಬಳಸಲು ಕೂಡ ಅನುಮತಿ ನೀಡಬೇಕು’’ ಎಂದು ಸಾಮಾಜಿ ಕಲ್ಯಾಣ ಇಲಾಖೆ ಕಳೆದ ವಾರ ನೀಡಿದ ಆದೇಶದಲ್ಲಿ ಹೇಳಿತ್ತು.
ಎನ್‌ಡಿಎಂಸಿ ಅಧ್ಯಕ್ಷರು ಹಾಗೂ ದಿಲ್ಲಿ ಪೊಲೀಸ್ ಆಯುಕ್ತರಿಗಲ್ಲದೆ, ಈ ಆದೇಶವನ್ನು ಇಲಾಖೆಗಳ ಕಾರ್ಯದರ್ಶಿಗಳಿಗೆ, ದಿಲ್ಲಿ ಕಂಟೋನ್ಮೆಂಟ್ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಹಾಗೂ ಎಲ್ಲಾ ಜಿಲ್ಲಾ ದಂಡಾಧಿಕಾರಿಗಳಿಗೆ ಕಳುಹಿಸಿ ಕೊಡಲಾಗಿದೆ.







