ದೇಶದ ಶಾಂತಿ ಸಾಮರಸ್ಯಕ್ಕೆ ಮುಸ್ಲಿಮರ ಕೊಡುಗೆ ಅಪಾರ: ಜಿಫ್ರಿ ಮುತ್ತುಕೋಯ ತಂಙಳ್
ಮೂಡಿಗೆರೆಯಲ್ಲಿ ನೂತನ ಖಾಝಿ ಸ್ವೀಕಾರ ಸಮಾರಂಭ

ಮೂಡಿಗೆರೆ, ಫೆ.17: ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಡಿಪಾಯ ನಿರ್ಮಿಸಿಕೊಳ್ಳಲು ಖಾಝಿ ಸ್ಥಾನ ಭದ್ರ ಬುನಾದಿಯಾಗಿದೆ ಎಂದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧ್ಯಕ್ಷ ಸೈಯ್ಯದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್ ಅಭಿಪ್ರಾಯಪಟ್ಟರು.
ಬುಧವಾರ ತಾಲೂಕಿನ ಹಾಂದಿ ಗ್ರಾಮದಲ್ಲಿರುವ ರಾಯಲ್ ಶಾಲಿಮಾರ್ ಹಾಲ್‍ನಲ್ಲಿ ತಾಲೂಕು ಸಂಯುಕ್ತ ಜಮಾತ್ ಒಕ್ಕೂಟದ ವತಿಯಿಂದ ಏರ್ಪಡಿಸಲಾಗಿದ್ದ 14 ಮಸೀದಿಗಳ ನೂತನ ಖಾಝಿ ಅಧಿಕಾರ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಸಾಮಾಜಿಕ ಭದ್ರತೆಗೆ ಮುಸ್ಲಿಮರ ಮಾತ್ರ ಮಹತ್ವದ್ದಾಗಿದೆ. ಹಿಂದಿನ ಮಹಾರಾಜರ ಕಾಲದಿಂದಲೂ ಮುಸ್ಲಿಮರು ದೇಶದ ಚುಕ್ಕಾಣಿ ಹಿಡಿದು ಆಡಳಿತ ನಡೆಸಿದರೂ ಇಲ್ಲಿನ ಸೌಹಾರ್ದ, ಶಾಂತಿ, ಸಹಬಾಳ್ವೆಗೆ ಭಂಗ ಉಂಟಾಗವಂತೆ ನಡೆದುಕೊಂಡಿರಲಿಲ್ಲ. ಈಗಿನ ಆಡಳಿತ ವ್ಯವಸ್ಥೆ ಮುಸ್ಲಿಮರಿಂದ ದೂರವಿದೆ. ಧಾರ್ಮಿಕ ಕ್ಷೇತ್ರದಿಂದಾದರೂ ಆರ್ಥಿಕ ಪ್ರಗತಿಗೆ ಸಹಕಾರಿಯಾಗಲೆಂದು ಖಾಝಿ ಸ್ಥಾನವನ್ನು ಮಸೀದಿ ಜಮಾಅತ್‍ಗಳು ವಹಿಸಿಕೊಡುವುದು ವಾಡಿಕೆ. ಖಾಝಿ ಸ್ಥಾನಕ್ಕೆ ಮುಸ್ಲಿಂ ಧಾರ್ಮಿಕ ಕ್ಷೇತ್ರದಲ್ಲಿ ನ್ಯಾಯಾಧೀಶರ ಸ್ಥಾನಮಾನ ನೀಡಲಾಗಿದೆ ಎಂದು ತಿಳಿಸಿದರು.
ಅಧಿಕಾರ ಸ್ವೀಕರಿಸಿದ ಬಳಿಕ ನೂತನ ಖಾಝಿ ಶೈಖುನಾ ಕೊಯ್ಯೋಡು ಪಿ.ಪಿ.ಉಮ್ಮರ್ ಮುಸ್ಲಿಯಾರ್ ಮಾತನಾಡಿ, ಕೇರಳ, ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗದ ಸಾಮಾಜಿಕ ಕ್ಷೇತ್ರದಲ್ಲಿ ಒಂದೇ ರೀತಿಯ ಸಮಾನ ವಾತಾವರಣವಿದೆ. ಧಾರ್ಮಿಕ ಕ್ಷೇತ್ರ ಮಾತ್ರ ಈ ಮೂರು ಕಡೆ ವಿಭಿನ್ನ ರೀತಿಯಲ್ಲಿ ಸಾಗುತ್ತಿದೆ. ಈ ಎಲ್ಲಾ ಅಂಶಗಳನ್ನು ಗುಣಾತ್ಮಕವಾಗಿ ಪರಿಗಣಿಸಿ ಸಾಮಾಜಿಕ ಹಾಗೂ ಧಾರ್ಮಿಕ ಗುಣಮಟ್ಟಕ್ಕೆ ಭಂಗ ಬರದಂತೆ ಎಚ್ಚರಿಕೆ ವಹಿಸಿ ಭಾರತೀಯ ಸಂವಿಧಾನಕ್ಕೆ ಬದ್ಧವಾಗಿ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದರು.
ಶೈಖುನಾ ಕೊಯ್ಯೋಡು ಪಿ.ಪಿ.ಉಮ್ಮರ್ ಮುಸ್ಲಿಯಾರ್ ಅವರು ತಾಲೂಕಿನ 14 ಮಸೀದಿಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಂದ ಖಾಝಿ ಸ್ಥಾನದ ಅಧಿಕಾರ ಸ್ವೀಕರಿಸಿದರು. ತಾಲೂಕು ಸಂಯುಕ್ತ ಜಮಾತ್ ಒಕ್ಕೂಟದ ಅಧ್ಯಕ್ಷ ಅಬ್ಲುಲ್ಲಾ ಹಾಜಿ ಅಧ್ಯಕ್ಷತೆ ವಹಿಸಿದ್ದರು.
ಧಾರ್ಮಿಕ ವಿದ್ವಾಂಸರಾದ ಎನ್.ಪಿ.ಎಂ.ಝೈನುಲ್ ಅಬಿದಿನ್ ತಂಙಳ್, ಕೆ.ಎಸ್.ಅಲಿ ತಂಙಳ್ ಕುಂಬೋಳ್, ಬಿ.ಕೆ.ಅಬ್ದುಲ್ ಖಾದರ್ ಅಲ್ ಕಾಸಿಮಿ ಬಂಬ್ರಾಣ, ಅಮೀರ್ ತಂಙಳ್, ಇರ್ಷಾಸ್ ದಾರಿಮಿ ಮಿತ್ತಬೈಲ್, ಮೂಡಿಗೆರೆ ಖತೀಬ್ ಯಾಕೂಬ್ ದಾರಿಮಿ, ಸಿನಾನ್ ಫೈಝಿ, ಹಂಝ ಮುಸ್ಲಿಯಾರ್, ಸಿ.ಕೆ.ಇಬ್ರಾಹಿಂ, ಕೆ.ಮಹಮ್ಮದ್, ಎ.ಸಿ.ಅಯೂಬ್ ಹಾಜಿ, ಎ.ಕೆ.ಇಸಾಕ್ ಭೂತನಕಾಡು, ಇಬ್ರಾಹಿಂ ಶಾಲಿಮಾರ್, ಅಕ್ರಂ ಹಾಜಿ, ಸುಲೈಮಾನ್ ಮುಸ್ಲಿಯಾರ್, ನಝೀರ್ ಹಾಜಿ, ಸಲೀಂ ಪೈಝಿ ಇರ್ಫಾನಿ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.








