ಅಕ್ರಮ ಹಣ ವರ್ಗಾವಣೆ ಆರೋಪ: ಸಿಐಡಿಯಿಂದ ಮಧುಕರ್ ಅಂಗೂರ್ ವಿಚಾರಣೆ ಸಾಧ್ಯತೆ
ಬೆಂಗಳೂರು, ಫೆ.17: ಅಲಯನ್ಸ್ ವಿವಿಯ ಮಾಜಿ ಕುಲಪತಿ ಮಧುಕರ್ ಅಂಗೂರ್ ವಿರುದ್ಧ ಗುರು ರಾಘವೇಂದ್ರ ಬ್ಯಾಂಕ್‍ನಲ್ಲಿ ಹಣ ಠೇವಣಿ ಮತ್ತು ಬೇನಾಮಿ ಖಾತೆಗೆ 7.5 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಮಧುಕರ್ ಅವರನ್ನು ಅಕ್ರಮ ಹಣ ವರ್ಗಾವಣೆ ಕೇಸ್‍ನಲ್ಲಿ ಸಿಐಡಿ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಜತೆಗೆ ಸಿಐಡಿಯಲ್ಲಿ ಅವರ ವಿರುದ್ಧ 2 ಪ್ರಕರಣಗಳು ದಾಖಲಾಗಿವೆ.
ನೋಟ್ ಬ್ಯಾನ್ ವೇಳೆ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಮೂರೂವರೆ ತಿಂಗಳಲ್ಲಿ 7.5 ಕೋಟಿ ರೂಪಾಯಿ ವರ್ಗಾವಣೆ ಮಾಡಿ ಬಳಿಕ ಬ್ಯಾಂಕ್‍ನಲ್ಲಿದ್ದ ತನ್ನ ಖಾತೆಯನ್ನು ಕ್ಲೋಸ್ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಮಧುಕರ್ ವಿಚಾರಣೆಗೆ ಸಿಐಡಿ ಮುಂದಾಗಿದೆ.
ಇನ್‍ಜಾಜ್ ಗ್ರೂಪ್ ವಂಚನೆ ಪ್ರಕರಣದಲ್ಲೂ ಮಧುಕರ್ ಹೆಸರು ಕೇಳಿ ಬಂದಿದೆ. ಜಮೀನು ಪಡೆದು ಮಾರಾಟದ ವೇಳೆ ಅವ್ಯವಹಾರ ಪತ್ತೆಯಾಗಿದ್ದು, ಈ ಪ್ರಕರಣ ಸಂಬಂಧ ಮಧುಕರ್ ಗೆ ಸಿಐಡಿ ನೋಟಿಸ್ ನೀಡಿದೆ. ಹೀಗಾಗಿ ಮಧುಕರ್ ಅವರು ನಿರೀಕ್ಷಣಾ ಜಾಮೀನಿಗೆ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಹಿಂದೆ ಮಧುಕರ್ ಅಂಗೂರ್ ವಿರುದ್ಧ 57 ಕೋಟಿ ರೂಪಾಯಿ ಸ್ವಂತಕ್ಕೆ ಬಳಸಿಕೊಂಡಿರುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಇಡಿ ಅಧಿಕಾರಿಗಳಿಂದ ಮಧುಕರ್ ವಿಚಾರಣೆ ನಡೆದಿತ್ತು. ಇಂದು ಕೂಡ ಇಡಿ ಅಧಿಕಾರಿಗಳಿಂದ ವಿಚಾರಣೆ ನಡೆಯಲಿದೆ. ಅಲ್ಲದೆ, ಮಧುಕರ್ ವಿದೇಶದಲ್ಲಿ ಹಣ ಹೂಡಿಕೆ ಮಾಡಿದ್ದ ಎಂಬ ಮಾಹಿತಿ ಸಿಕ್ಕಿದ್ದು ಈ ಬಗ್ಗೆ ಇಡಿ ಅಧಿಕಾರಿಗಳು ತನಿಖೆ ಶುರು ಮಾಡಿದ್ದಾರೆ. ತೆರಿಗೆ ವಂಚನೆ ಪ್ರಕರಣದಲ್ಲಿ ಐಟಿ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದೆ. ಇಡಿ, ಐಟಿ ಬಳಿಕ ಇದೀಗ ಸಿಐಡಿಯಿಂದ ವಿಚಾರಣೆ ಸಾಧ್ಯತೆ.







