ಬಿಡುಗಡೆಯಾಗದ ಗೌರವಧನ: ಮಡಿಕೇರಿಯಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಮಡಿಕೇರಿ, ಫೆ. 17: ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆ ಸಂದರ್ಭ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತರಿಗೆ ನೀಡಲು ಬಾಕಿ ಇರುವ ಗೌರವ ಧನವನ್ನು ತಕ್ಷಣ ಬಿಡುಗಡೆ ಮಾಡಬೇಕು ಮತ್ತು ಮಾಸಿಕ ವೇತನ 12 ಸಾವಿರ ರೂ. ನಿಗಧಿ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕೊಡಗು ಜಿಲ್ಲಾ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಸರ್ಕಾರದ ವಿಳಂಬ ಧೋರಣೆಯನ್ನು ಖಂಡಿಸಿದರು. ಆಶಾ ಕಾರ್ಯಕರ್ತರಿಗೆ ನಿಗದಿತ ವೇತನವಿಲ್ಲದ ಕಾರಣ ಪ್ರೋತ್ಸಾಹ ಧನವನ್ನು ಆಧರಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚಿಗೆ ನಡೆದ ಗ್ರಾ.ಪಂ ಚುನಾವಣೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಕರ್ತವ್ಯ ನಿರ್ವಹಿಸಿದ್ದಾರೆ. ಇದಕ್ಕಾಗಿ ರೂ.700 ಗೌರವಧನ ನೀಡುವಂತೆ ಚುನಾವಣಾ ಆಯೋಗ ಆದೇಶ ನೀಡಿತ್ತು. ಆದರೆ ಕೊಡಗಿನ ಆಶಾ ಕಾರ್ಯಕರ್ತೆಯರಿಗೆ ಇಲ್ಲಿಯವರೆಗೆ ಈ ಗೌರವ ಧನ ಬಿಡುಗಡೆಯಾಗಿಲ್ಲವೆಂದು ಪ್ರತಿಭಟನಾಕಾರರು ಆರೋಪಿಸಿದರು.
ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರ್ಪಡೆಗೊಳಿಸುವ ಗ್ರಾಮ ಮಟ್ಟದ ಶಿಕ್ಷಣ ಕಾರ್ಯಪಡೆಗೂ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ. ಇದರಿಂದ ಆರೋಗ್ಯ ಇಲಾಖೆಯ ಸೇವೆಗಳಿಗಷ್ಟೇ ಸೀಮಿತವಾಗಿದ್ದ ಕಾರ್ಯಕರ್ತರಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆರೋಗ್ಯ ಇಲಾಖೆಯ ಯೋಜನೆಗಳನ್ನು ಜನರಿಗೆ ಸಮಪರ್ಕವಾಗಿ ತಲುಪಿಸುವ ಕಾರ್ಯವನ್ನು ಆಶಾ ಕಾರ್ಯಕರ್ತೆಯರು ಬದ್ಧತೆಯಿಂದ ಮಾಡುತ್ತಾ ಬರುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳ ಸರ್ವೆಯ ನಂತರದ ಮಾಹಿತಿಯನ್ನು ಮೊಬೈಲ್ ಮೂಲಕ ಅಪ್‍ಲೋಡ್ ಮಾಡುವ ಕಾರ್ಯವನ್ನೂ ಕಡ್ಡಾಯ ಮಾಡಲಾಗಿದೆ. ಹಲವು ಮಂದಿ ಆಶಾ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ಇಲ್ಲದೆ ಪರದಾಡುವಂತಾಗಿದ್ದು, ನೆಟ್‍ವರ್ಕ್ ಸಮಸ್ಯೆಯನ್ನು ಕೂಡ ಎದುರಿಸುತ್ತಿದ್ದಾರೆ. ಆದ್ದರಿಂದ ಮಾಹಿತಿ ಅಪ್ ಲೋಡ್ ಮಾಡುವ ಕಾರ್ಯವನ್ನು ಕಡ್ಡಾಯಗೊಳಿಸದೆ ಸ್ವ-ಇಚ್ಛೆಯಿಂದ ಮಾಡುವವರಿಗೆ ಮಾತ್ರ ಅವಕಾಶ ನೀಡಬೇಕು ಮತ್ತು ಈ ಹಿಂದಿನ ಸರ್ಕಾರದ ಭರವಸೆಯಂತೆ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12 ಸಾವಿರ ರೂ. ವೇತನ ನಿಗಧಿ ಮಾಡಿ ಬಜೆಟ್ ನಲ್ಲಿ ಘೋಷಿಸಬೇಕೆಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷೆ ಪೂರ್ಣಿಮಾ ಬಸಪ್ಪ, ಕಾರ್ಯದರ್ಶಿ ಸುಮನ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.







