ಪರಸ್ಪರ ಕಾಲೆಳೆದುಕೊಂಡ ಶಾಸಕ ಹಾಲಪ್ಪ- ಬೇಳೂರು ಗೋಪಾಲಕೃಷ್ಣ

ಶಿವಮೊಗ್ಗ: ಶಾಸಕ ಹರತಾಳು ಹಾಲಪ್ಪ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಮುಸುಕಿನ ಗುದ್ದಾಟಕ್ಕೆ ಈಡಿಗರ ಭವನ ಉದ್ಘಾಟನೆ ಸಮಾರಂಭ ಸಾಕ್ಷಿಯಾಯಿತು.
ಉದ್ಘಾಟನೆ ಕಾರ್ಯಕ್ರಮದಲ್ಲಿ ಇಬ್ಬರು ನಾಯಕರು ಪರಸ್ಪರ ಕಾಲೆಳೆದುಕೊಂಡರು. ಆರಂಭದಲ್ಲಿ ಮಾತನಾಡಿದ ಶಾಸಕ ಹರತಾಳು ಹಾಲಪ್ಪ, 12 ವರ್ಷದ ಹಿಂದೆ ಈಡಿಗರ ಭವನಕ್ಕೆ ಗುದ್ದಲಿ ಪೂಜೆ ಮಾಡಲಾಗಿತ್ತು. ಆಗಿನ ಶಂಕುಸ್ಥಾಪನೆಗೆ ಕೆಲವರು ಬಹಿಷ್ಕಾರ ಹಾಕಿದ್ದರು. ಸಮಾಜ ಅಂದ ಮೇಲೆ ಇವೆಲ್ಲಾ ಇದ್ದದ್ದೇ ಎಂದು ಹೇಳಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಟಿ ಚನ್ನಯ್ಯ ಪಾರ್ಕ್ ನಿರ್ಮಾಣ, ನಾರಾಯಣಗುರು ಜಯಂತಿ ಘೋಷಣೆ, ನಿಟ್ಟೂರು ಮಠಕ್ಕೆ 2 ಕೋಟಿ, ಸೋಲೂರು ಮಠಕ್ಕೆ 3 ಕೋಟಿ ಹೀಗೆ ಅನುದಾನ ನೀಡಲಾಗಿದೆ. ಇಲ್ಲಿ ನೆರೆದಿರುವ ಸಮಾಜದ ತಾಲೂಕು ಅಧ್ಯಕ್ಷರು ನಿಜವಾಗಿಯೂ ವೇದಿಕೆಯ ಮೇಲೆ ಕೂರಬೇಕಾಗಿತ್ತು, ಕೂತಿಲ್ಲ. ಕೆಲವರು ಹಾಲಪ್ಪನ ಹೆಸರು ಎಷ್ಟು ಕೆಳಗೆ ಹಾಕಬಹುದು ಅಂತ ಲೆಕ್ಕ ಹಾಕಿದ್ದಾರೆ ಎಂದರು.
ನಂತರ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಶಂಕುಸ್ಥಾಪನೆಗೆ ಕೆಲವೇ ಜನರನ್ನು ಮಾತ್ರ ಕರೆದಿದ್ದರಿಂದ 12 ವರ್ಷಗಳ ಹಿಂದೆ ಈ ಶಂಕು ಸ್ಥಾಪನೆಗೆ ಬಹಿಷ್ಕಾರ ಹಾಕಿದ್ದೆ. ಈ ಜಾಗವನ್ನು ಯಡಿಯೂರಪ್ಪ ಸುಮ್ಮನೇ ಏನೂ ಕೊಡಲಿಲ್ಲ. ಈ ಜಾಗ ಕೇಳಲು ಹೋದಾಗ ಲೋಕಸಭಾ ಚುನಾವಣೆ ಘೋಷಣೆ ಆಗಿತ್ತು. ಮಗ ರಾಘವೇಂದ್ರ ಗೆಲುವಿಗೆ ಅನುಕೂಲ ಅಂತ ಜಾಗ ನೀಡಿದರು ಎಂದರು.





