ಆಕ್ಸ್ ಫರ್ಡ್ ವಿವಿ ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷೆ ಹುದ್ದೆಗೆ ಮಣಿಪಾಲ ಮೂಲದ ರಶ್ಮಿ ಸಾಮಂತ್ ರಾಜೀನಾಮೆ
ಹಿಂದೆ ಜನಾಂಗೀಯ ಪೋಸ್ಟ್ ಮಾಡಿದ್ದಾರೆಂಬ ಆರೋಪ

ರಶ್ಮಿ ಸಾಮಂತ್
ಲಂಡನ್, ಫೆ. 18: ಕೆಲವು ದಿನಗಳ ಹಿಂದೆಯಷ್ಟೇ ಬ್ರಿಟನ್ನ ಆಕ್ಸ್ಫರ್ಡ್ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಮೊದಲ ಭಾರತೀಯ ಮಹಿಳೆಯಾಗಿ ಇತಿಹಾಸ ನಿರ್ಮಿಸಿದ್ದ ರಶ್ಮಿ ಸಾಮಂತ್ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ತನ್ನ ಹಿಂದಿನ ಕೆಲವು ಹೇಳಿಕೆಗಳು ವಿವಾದ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಅವರ ಕೆಲವು ಹಳೆಯ ಸಾಮಾಜಿಕ ಮಾಧ್ಯಮ ಸಂದೇಶಗಳು ಈಗ ಹೊರಬಿದ್ದಿದ್ದು, ಅವುಗಳನ್ನು ‘ಜನಾಂಗೀಯವಾದಿ’ ಹಾಗೂ ‘ಸಂವೇದನಾರಹಿತ’ ಎಂಬುದಾಗಿ ಬಣ್ಣಿಸಲಾಗಿದೆ.
2017ರಲ್ಲಿ ಜರ್ಮನಿಯ ಬರ್ಲಿನ್ನಲ್ಲಿರುವ ಯಹೂದಿ ಸಾಮೂಹಿಕ ಹತ್ಯಾಕಾಂಡ ಸ್ಮಾರಕಕ್ಕೆ ಭೇಟಿ ನೀಡಿದ್ದ ವೇಳೆ, ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಡಿರುವ ಟಿಪ್ಪಣಿ ವಿವಾದಕ್ಕೆ ಕಾರಣವಾಗಿದೆ. ಮಲೇಶ್ಯಕ್ಕೆ ಭೇಟಿ ನೀಡಿದ್ದ ವೇಳೆ, ಇನ್ಸ್ಟಾಗ್ರಾಮ್ನಲ್ಲಿ ತನ್ನದೇ ಚಿತ್ರವೊಂದನ್ನು ಹಾಕಿ, ಕೆಳಗೆ ‘ಚಿಂಗ್ ಚಾಂಗ್’ ಎಂದು ಬರೆದಿದ್ದರು. ಅದು ಚೀನೀ ವಿದ್ಯಾರ್ಥಿಗಳಿಗೆ ನೋವುಂಟು ಮಾಡಿದೆ ಎಂದು ಹೇಳಲಾಗಿದೆ.
ಮಹಿಳೆಯರು ಮತ್ತು ಲಿಂಗಪರಿವರ್ತಿತ ಮಹಿಳೆಯರ ನಡುವೆ ತಾರತಮ್ಯ ಮಾಡುವಂಥ ಹೇಳಿಕೆಯೊಂದನ್ನೂ 22 ವರ್ಷದ ರಶ್ಮಿ ಸಾಮಂತ್ ಸಾಮಾಜಿಕ ಮಾಧ್ಯಮದಲ್ಲಿ ನೀಡಿದ್ದರು. ಅದಕ್ಕೆ ‘ಆಕ್ಸ್ಫರ್ಡ್ ಎಲ್ಜಿಬಿಟಿಕ್ಯೂ+’ ಅತೃಪ್ತಿ ವ್ಯಕ್ತಪಡಿಸಿದ್ದು ರಾಜೀನಾಮೆ ನೀಡುವಂತೆ ಒತ್ತಾಯಿಸಿದೆ.
‘‘ಆಕ್ಸ್ಫರ್ಡ್ ವಿದ್ಯಾರ್ಥಿ ಸಂಘಕ್ಕೆ ನಾನು ಅಧ್ಯಕ್ಷೆಯಾಗಿ ಆಯ್ಕೆಯಾದ ಬಳಿಕ ಎದ್ದಿರುವ ವಿವಾದದ ಹಿನ್ನೆಲೆಯಲ್ಲಿ, ಈ ಹುದ್ದೆಯಿಂದ ಕೆಳಗಿಳಿಯುವುದೇ ಉತ್ತಮ ಎಂದು ನಾನು ಭಾವಿಸಿದ್ದೇನೆ. ನಿಮ್ಮ ನಿಯೋಜಿತ ಅಧ್ಯಕ್ಷೆಯಾಗಿರುವುದು ನನಗೆ ಲಭಿಸಿದ ಗೌರವವಾಗಿದೆ’’ ಎಂದು ಮಂಗಳವಾರ ಫೇಸ್ಬುಕ್ನಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ಅವರು ತಿಳಿಸಿದ್ದಾರೆ. 22 ವರ್ಷದ ರಶ್ಮಿ ಸಾಮಂತ್ ಉಡುಪಿ ಜಿಲ್ಲೆಯ ಮಣಿಪಾಲದವರು.
ತವರಿನಲ್ಲಿ ಪತ್ರಿಕಾಗೋಷ್ಠಿ
ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷತೆಗೆ ರಾಜೀನಾಮೆ ನೀಡಿದ ಬಳಿಕ, ರಶ್ಮಿ ಸಾಮಂತ್ ಭಾರತಕ್ಕೆ ಮರಳುತ್ತಿದ್ದಾರೆ.
‘‘ರಶ್ಮಿ ಭಾರತಕ್ಕೆ ಮರಳಿದ ಬಳಿಕ, ಎಲ್ಲ ವಿಷಯಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲಿದ್ದಾರೆ’’ ಎಂದು ಅವರ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.







