ರಾಮ ಮಂದಿರ ನಿರ್ಮಾಣ ಕುರಿತು ಹೇಳಿಕೆ: ಮಾಜಿ ಸಿಎಂಗಳ ಕ್ಷಮೆಯಾಚನೆಗೆ ಬಿಜೆಪಿ ಆಗ್ರಹ

ಮಂಗಳೂರು : ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ಶ್ರೀರಾಮ ಮಂದಿರ ನಿರ್ಮಾಣದ ಕುರಿತಂತೆ ಬೇಜವಾಬ್ದಾರಿಯ ಹೇಳಿಕೆ ನೀಡಿದ್ದು, ಅವರು ನಾಡಿನ ಜನತೆಯ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಆಗ್ರಹಿಸಿದ್ದಾರೆ.
ದ.ಕ. ಬಿಜೆಪಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಮಮಂದಿರದ ಪುಣ್ಯ ಕಾರ್ಯಕ್ಕಾಗಿ ನಿಧಿ ಸಂಗ್ರಹ ಅಭಿಯಾನವನ್ನು ಎಲ್ಲಾ ವರ್ಗದ ಜನರನ್ನು ಸಂಪರ್ಕಿಸಿ ಪಾರದರ್ಶಕವಾಗಿ ನಡೆಸಲಾಗುತ್ತಿದೆ. ಆದರೆ, ಈ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಕೆಲವರು ಮೊಸರಿನಲ್ಲಿ ಕಲ್ಲುಹುಡುಕುವ ವ್ಯರ್ಥಪ್ರಯತ್ನಕ್ಕೆ ಮುಂದಾಗಿರುವುದು ಖಂಡನೀಯ ಎಂದರು.
ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಮೂಲೆಗುಂಪಾಗಿ ರಾಜ್ಯದ ಕೆಲವೇ ಜಿಲ್ಲೆಗಳಲ್ಲಿರುವ ಪಕ್ಷದ ಉಳಿವಿಗಾಗಿ ಒಂದು ವರ್ಗದ ಓಲೈಕೆಗಾಗಿ ರಾಜಕೀಯ ದುರುದ್ದೇಶದಿಂದ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಅವರ ಒಡೆದು ಆಳುವ ಮನಸ್ಸಿಗೆ ಕೈಗನ್ನಡಿಯಾಗಿದೆ. ದ್ವೇಷಪೂರಿತ ಹೇಳಿಕೆಗಳ ಮೂಲಕ ಸಮಾಜದಲ್ಲಿ ವಿಷಬೀಜ ಬಿತ್ತಿ ತಮ್ಮ ರಾಜಕೀಯ ಭವಿಷ್ಯವನ್ನು ಭದ್ರಗೊಳಿಸುವ ಉದ್ದೇಶದಿಂದ ಸಿದ್ದರಾಮಯ್ಯ ಅವರ ಹೇಳಿಕೆ ಖಂಡನೀಯ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವುದು ವಿವಾದಿತ ಸ್ಥಳದಲ್ಲಿ ಎಂಬ ಸಿದ್ದರಾಮಯ್ಯ ಹೇಳಿಕೆ ಸವೋಚ್ಚ ನ್ಯಾಯಾಲಯ ನೀಡಿರುವ ತೀರ್ಪನ್ನು ಧಿಕ್ಕರಿಸುವ ವರ್ತನೆಯಾಗಿದೆ. ಮಾಜಿ ಮುಖ್ಯಮಂತ್ರಿಗಳಿಬ್ಬರ ಒಡೆದು ಆಳುವ ಮಾನಸಿಕತೆಯನ್ನು ಈ ದೇಶ ಪ್ರೀತಿಸುವ ಗೌರವಿಸುವ ಹಾಗೂ ಆರಾಧಿಸುವ ಬಹುದೊಡ್ಡ ಸಮಾಜ ಚೆನ್ನಾಗಿ ಅರ್ಥೈಸಿಕೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು, ಜಿಲ್ಲಾ ವಕ್ತಾರ ರಣದೀಪ್ ಉಪಸ್ಥಿತರಿದ್ದರು.







