ಪುತ್ತೂರು: ಸಾಲ ವಸೂಲಿಗಾಗಿ ಮನೆ ಮುಟ್ಟುಗೋಲು; ಡೆತ್ ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆ

ಪುತ್ತೂರು: ಬ್ಯಾಂಕ್ ಅಡಮಾನ ಸಾಲಕ್ಕೆ ಮನೆ ಮುಟ್ಟಗೋಲು ಹಾಕಲು ಬಂದ ರಾಷ್ಟ್ರೀಕೃತ ಬಾಂಕ್‍ನ ಸಿಬ್ಬಂದಿ ಸಮ್ಮುಖದಲ್ಲಿ ಮರ್ಯಾದೆಗೆ ಅಂಜಿ ಮನೆ ಮಾಲಕನ ಪತ್ನಿ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಮಧ್ಯಾಹ್ನ ಪುತ್ತೂರು ನಗರದ ಹಾರಾಡಿ ರೈಲ್ವೇ ರಸ್ತೆಯ ಬಳಿ ನಡೆದಿದೆ.
ಇಲ್ಲಿನ ನಿವಾಸಿ ಉದ್ಯಮಿ ರಘುವೀರ್ ಪ್ರಭು ಎಂಬವರ ಪತ್ನಿ ಪ್ರಾರ್ಥನಾ ಪ್ರಭು (52) ಆತ್ಮಹತ್ಯೆ ಮಾಡಿಕೊಂಡವರು.
ರಾಷ್ಟ್ರೀಕೃತ ಬ್ಯಾಂಕ್‍ನಿಂದ ಸಾಲ ಪಡೆದಿದ್ದು, ಸಾಲ ಮರುಪಾವತಿ ಮಾಡಿಲ್ಲ ಎಂದು ಬ್ಯಾಂಕ್ ನೋಟೀಸ್ ಬಂದಿತ್ತು. ಅದಾದ ಬಳಿಕ ಕೋರ್ಟ್ ನೋಟೀಸ್ ಮೂಲಕ ಮನೆ ಮುಟ್ಟುಗೋಲು ಹಾಕಲು ಫೆ. 18ರಂದು ಬ್ಯಾಂಕ್ ಸೀಸರ್ ಜೊತೆ ಬಂದಾಗ ಮನೆ ಮಂದಿ ಆತಂಕಕ್ಕೊಳಾಗಿದ್ದರು. ಈ ನಡುವೆ ಪ್ರಾರ್ಥನಾ ಪ್ರಭು ಅವರು ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ರಘುವೀರ ಪ್ರಭು ಅವರು ಕೆನರಾ ಬ್ಯಾಂಕ್‍ನಲ್ಲಿ ಹೊಂದಿದ್ದ ಸಾಲದ ಬಾಬ್ತು ಮಂಗಳೂರಿನ ಕೆನರಾ ಬ್ಯಾಂಕ್ ಕೋರ್ಟು ಆದೇಶದೊಂದಿಗೆ ಮನೆ ಮುಟ್ಟುಗೋಲು ಹಾಕಲು ಇಂದು ಹಾರಾಡಿಯಲ್ಲಿರುವ ಮನೆಗೆ ಬಂದಿದ್ದರು. ಈ ಸಂದರ್ಭ ಮನೆಯೊಳಗಿದ್ದ ಪ್ರಾರ್ಥನಾ ಪ್ರಭು ಅವರು ಕೋಣೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಬ್ಯಾಂಕ್ ಮುಟ್ಟುಗೋಲಿಗೆ ಭದ್ರತೆ ಒದಗಿಸಲು ಬಂದ ಪೊಲೀಸರು ನೇಣು ಬಿಗಿದ ಸ್ಥಿತಿಯಲ್ಲಿದ್ದ ಪ್ರಾರ್ಥನಾ ಪ್ರಭು ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದರು. ಆದರೆ ಈ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್.ಐ ಜಂಬುರಾಜ್ ಮಹಾಜ್, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ರಾಧಾಕೃಷ್ಣ ಭಕ್ತ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ನಗರ ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಸಚಿನ್ ಶೆಣೈ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಕಾಮತ್, ಸದಾಶಿವ ಪೈ ಮತ್ತಿತರರು ಆಗಮಿಸಿ ಮನೆ ಮಂದಿಗೆ ಸಾಂತ್ವನ ಹೇಳಿದರು ಹಾಗೂ ಬ್ಯಾಂಕ್‍ನ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದರು.
ಘಟನೆಯ ಕುರಿತು ಮೃತರ ಪತಿ ರಘುವೀರ್ ಪ್ರಭು ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.







