ಅವಿಭಜಿತ ದ.ಕ. ಜಿಲ್ಲೆಯ ಹಿರಿಯ ನೇಕಾರರಿಗೆ ಸನ್ಮಾನ

ಉಡುಪಿ, ಫೆ.18: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಅತ್ಯಂತ ಹಿರಿಯ ನೇಕಾರರನ್ನು ಉಭಯ ಜಿಲ್ಲೆಗಳಲ್ಲಿ ಉಡುಪಿ ಸೀರೆ ನೇಕಾರಿಕೆಯ ಪುನಶ್ಚೇತನದ ಕುರಿತಂತೆ ವಿಶೇಷ ಕೆಲಸ ಮಾಡುತ್ತಿರುವ ಕಾರ್ಕಳದ ಕದಿಕೆ ಟ್ರಸ್ಟ್‌ನ ವತಿಯಿಂದ ಉಡುಪಿಯಲ್ಲಿರುವ ಶಿವಳ್ಳಿ ನೇಕಾರರ ಸಂಘದ ಸಭಾಭವನದಲ್ಲಿ ಬುಧವಾರ ಸಂಜೆ ಆತ್ಮೀಯವಾಗಿ ಸನ್ಮಾನಿಸ ಲಾಯಿತು.
86 ವರ್ಷ ಪ್ರಾಯದ ಉಡುಪಿ ನೇಕಾರರ ಸಂಘದ ಸೋಮಪ್ಪ ಜತ್ತನ್ನ ಹಾಗೂ 83 ವರ್ಷ ಪ್ರಾಯದ ಶಿವಳ್ಳಿ ನೇಕಾರರ ಸಂಘದ ಸಂಜೀವ ಶೆಟ್ಟಿಗಾರ್ ಸನ್ಮಾನಿತರಾದ ಜಿಲ್ಲೆಯ ಅತ್ಯಂತ ಹಿರಿಯ ವಯಸ್ಸಿನ ನೇಕಾರರಾಗಿದ್ದಾರೆ.
ತಮ್ಮ ಹಿರಿ ವಯಸ್ಸಿನ ಹೊರತಾಗಿಯೂ ಇನ್ನೂ ಚಟುವಟಿಕೆಯಿಂದ ಕೈಮಗ್ಗದಲ್ಲಿ ಕುಳಿತು ನೇಯುತ್ತಿರುವ ಸೋಮಪ್ಪ ಜತ್ತನ್ನ ಕಳೆದ 63 ವರ್ಷ ಗಳಿಂದ ಮತ್ತು ಸಂಜೀವ ಶೆಟ್ಟಿಗಾರ್ ಕಳೆದ 72 ವರ್ಷಗಳಿಂದ ನಿರಂತರವಾಗಿ ನೇಕಾರಿಕೆ ಮಾಡುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಇಬ್ಬರು ಅನುಭವಿ ನೇಕಾರರನ್ನು ಅಭಿನಂದಿಸಿ ಮಾತನಾಡಿದ ಕದಿಕೆ ಟ್ರಸ್ಟ್‌ನ ಅಧ್ಯಕ್ಷೆ ಮಮತ ರೈ ಯಾವುದೇ ಹೆಚ್ಚಿನ ಫಲಾಪೇಕ್ಷೆ ಇಲ್ಲದೇ ದುಡಿಯುತ್ತಿರುವ ಇಂಥ ಹಿರಿಯ ನೇಕಾರರಿಂದಾಗಿಯೇ ಉಡುಪಿ ಸೀರೆ ನೇಕಾರಿಕೆ ಇಲ್ಲಿ ಯವರೆಗೂ ಉಳಿದುಕೊಂಡು ಬಂದಿದೆ ಎಂದರು.
ಕದಿಕೆ ಟ್ರಸ್ಟ್ ಕಳೆದ ಮೂರು ವರ್ಷಗಳಲ್ಲಿ ನಿರಂತರವಾಗಿ ನಡೆಸಿದ ಕಾರ್ಯದಿಂದ ಎರಡು ಜಿಲ್ಲೆಗಳಲ್ಲಿ ಒಟ್ಟು 42 ಜನ ನೇಕಾರರೊಂದಿಗೆ ಅಳಿವಿನಂಚಿನಲ್ಲಿದ್ದ ಉಡುಪಿ ಸೀರೆ ನೇಕಾರಿಕೆ ಈಗ 70ರಷ್ಟು ನೇಕಾರರಿಗೆ ವೃದ್ಧಿಸಿದ್ದು, ಪುನಶ್ಚೇತನದ ಹಾದಿಯಲ್ಲಿದೆ ಎಂದು ಆಶಾವಾದ ವ್ಯಕ್ತಪಡಿಸಿದರು.
ಉಡುಪಿ ನೇಕಾರರ ಸಂಘದ ಆಡಳಿತ ನಿರ್ದೇಶಕ ಸದಾನಂದ ಕಾಂಚನ್ ಅವರು ಶಿವಳ್ಳಿ ಸಂಘದ ಅಧ್ಯಕ್ಷರೂ ಆಗಿರುವ ಸಂಜೀವ ಶೆಟ್ಟಿಗಾರ್ ಅವರನ್ನು, ತಾಳಿಪಾಡಿ ನೇಕಾರರ ಸಂಘದ ಅಧ್ಯಕ್ಷ ಮಾಧವ ಶೆಟ್ಟಿಗಾರ್ ಅವರು ಸೋಮಪ್ಪ ಜತ್ತನ್ನರನ್ನೂ ಸನ್ಮಾನಿಸಿದರು. ಸನ್ಮಾನಿತರಿಗೆ ತಾಳಿಪಾಡಿ ಸಂಘದಲ್ಲಿ ನೇಕಾರಿಕೆ ತರಬೇತಿ ಪಡೆಯುತ್ತಿರುವ ಶಿಬಿರಾರ್ಥಿಗಳು ನೇಯ್ದ ಶಾಲು ಹೊದಿಸಿ, ಅಂಗವಸ್ತ್ರ ಹಾಗೂ ಕಿರುಕಾಣಿಕೆಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಿವಳ್ಳಿ ಸಂಘದ ಎಲ್ಲಾ ನೇಕಾರರಿಗೂ ಕದಿಕೆ ಟ್ರಸ್ಟ್‌ನಿಂದ ಕೊಡ ಮಾಡಿದ ಪ್ರೋತ್ಸಾಹಧನ ಮತ್ತು ಅಂಗವಸ್ತ್ರವನ್ನು ನೀಡಲಾಯಿತು. ಅಲ್ಲದೇ ಶಿವಳ್ಳಿ ಸಂಘ ತಮ್ಮ ಸದಸ್ಯರಿಗೆ ಕೊಡಮಾಡಿದ ಆರೋಗ್ಯ ಕಾರ್ಡ್‌ನ್ನು ಅತಿಥಿಗಳು ಸದಸ್ಯರಿಗೆ ವಿತರಿಸಿದರು.
ಶಿವಳ್ಳಿ ನೇಕಾರರ ಸಂಘದ ಆಡಳಿತ ನಿರ್ದೇಶಕ ಶಶಿಕಾಂತ್ ಕೋಟ್ಯಾನ್ ಅತಿಥಿಗಳನ್ನು ಸ್ವಾಗತಿಸಿದರೆ, ಕದಿಕೆ ಟ್ರಸ್ಟ್‌ನ ಕಾರ್ಯದರ್ಶಿ ಚಿಕ್ಕಪ್ಪ ಶೆಟ್ಟಿ ವಂದಿಸಿದರು. ಈ ಸಂದರ್ಭದಲ್ಲಿ ಶಿವಳ್ಳಿ ಸಂಘದ ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.







