ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ: ಶಾಸಕ ರಘುಪತಿ ಭಟ್ ಸಲಹೆ
ಬೆಂಗಳೂರಲ್ಲಿ ಸರಕಾರಿ ಭರವಸೆಗಳ ಸಮಿತಿ ಸಭೆ

ಉಡುಪಿ, ಫೆ.18: ಉಡುಪಿಯ ಶಾಸಕ ಕೆ.ರಘುಪತಿ ಭಟ್ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ವಿಧಾನಸಭೆಯ ಸರಕಾರಿ ಭರವಸೆಗಳ ಸಮಿತಿ ಸಭೆ ಗುರುವಾರ ಬೆಂಗಳೂರಿನಲ್ಲಿ ನಡೆಯಿತು. ಸಭೆಯಲ್ಲಿ ಸಣ್ಣನೀರಾವರಿ ಇಲಾಖೆಗೆ ಸಂಬಂಧಿಸಿದ ಬಾಕಿ ಇರುವ ಭರವಸೆಗಳ ಬಗ್ಗೆ ಚರ್ಚಿಸಲಾಯಿತು.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿರುವ ದೊಡ್ಡ ದೊಡ್ಡ ಕೆರೆಗಳನ್ನು ‘ಕೆರೆ ಸಂಜೀವಿನಿ’ ಯೋಜನೆಯಡಿ ಹೂಳೆತ್ತುವುದು ಹಾಗೂ ಕಿಂಡಿ ಅಣೆಕಟ್ಟುಗಳು ಇರುವ ಆಸುಪಾಸಿನ ಕೆರೆಗಳನ್ನು ಏತ ನೀರಾವರಿ ಮೂಲಕ ತುಂಬಿಸಲು ಯೋಜನೆ ರೂಪಿಸುವಂತೆ ಶಾಸಕ ಭಟ್ ಅಧಿಕಾರಿ ಗಳಿಗೆ ಸಲಹೆ ನೀಡಿದರು.
ಅಲ್ಲದೆ ರಾಜ್ಯದಲ್ಲಿ ಕೆರೆಗಳ ಒತ್ತುವರಿಯಾಗುವುದನ್ನು ತಡೆಯಬೇಕು. ಸರಕಾರಿ ಯೋಜನೆಗಳಲ್ಲಿ ಕೆರೆ ಒತ್ತುವರಿಯಾದರೆ ಕೆರೆಯ ಪಕ್ಕದ ಜಾಗ ವನ್ನು ವಶಪಡಿಸಿಕೊಂಡು ಅದನ್ನು ಸೇರಿಸಿ ಕೆರೆಯ ಅಭಿವೃದ್ಧಿಗೆ ಸೂಕ್ತ ಕ್ರಮ ಜರುಗಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ, ಪ್ರಧಾನ ಇಂಜಿನಿಯರ್ ಸಣ್ಣ ನೀರಾವರಿ ಇಲಾಖೆ (ದಕ್ಷಿಣ ವಲಯ) ಎಚ್.ಎಲ್. ಪ್ರಸನ್ನ, ಮುಖ್ಯ ಇಂಜಿನಿಯರ್ ಸಣ್ಣ ನೀರಾವರಿ (ಉತ್ತರ ವಲಯ) ಜಿ.ಟಿ.ಸುರೇಶ್, ಕಾರ್ಯಪಾಲಕ ಅಭಿಯಂತರ ಸಣ್ಣ ನೀರಾವರಿ ಇಲಾಖೆ ಮಂಗಳೂರು ಗೋಕುಲ್ದಾಸ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.








