ಆನ್‍ಲೈನ್ ಜೂಜು ನಿಷೇಧಿಸಲು ಕೋರಿ ಪಿಐಎಲ್: ನಿಲುವು ತಿಳಿಸಲು ಸರಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು, ಫೆ.18: ಆನ್‍ಲೈನ್ ಮೂಲಕ ನಡೆಯುವ ಜೂಜು ಮತ್ತು ಬೆಟ್ಟಿಂಗ್ ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಸರಕಾರ ತನ್ನ ನಿಲುವು ತಿಳಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ಆನ್‍ಲೈನ್ ಜೂಜು ನಿಯಂತ್ರಿಸಲು ರಾಜ್ಯದಲ್ಲಿ ಯಾವುದೇ ಸೂಕ್ತ ನಿಯಮಾವಳಿಗಳಿಲ್ಲ. ಈ ನಿಯಮಗಳನ್ನು ರೂಪಿಸುವವರೆಗೆ ಆನ್‍ಲೈನ್ ಜೂಜಿಗೆ ಅನುಮತಿಸಬಾರದು ಎಂದು ಕೋರಿ ದಾವಣಗೆರೆ ನಿವಾಸಿ ಡಿ.ಆರ್.ಶಾರದಾ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ಸೂಚನೆ ನೀಡಿದೆ.
ಸರಕಾರದ ಪರ ವಾದಿಸಿದ ವಕೀಲರು, ಆನ್‍ಲೈನ್ ಬೆಟ್ಟಿಂಗ್‍ಗೆ ಸಂಬಂಧಿಸಿದ ವಿಷಯವನ್ನು ಸಚಿವ ಸಂಪುಟದಲ್ಲಿಟ್ಟು ಚರ್ಚಿಸಲು ನಿರ್ಧರಿಸಲಾಗಿದೆ. ಸದ್ಯದಲ್ಲೇ ಈ ಸಂಬಂಧ ಸರಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.
ಹೇಳಿಕೆ ದಾಖಲಿಸಿಕೊಂಡ ಪೀಠ, ಆನ್‍ಲೈನ್ ಜೂಜು ನಿಯಂತ್ರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸಚಿವ ಸಂಪುಟ ಕೈಗೊಳ್ಳುವ ನಿರ್ಧಾರವನ್ನು ಲಿಖಿತವಾಗಿ ಸಲ್ಲಿಸುವಂತೆ ಸರಕಾರದ ಪರ ವಕೀಲರಿಗೆ ಸೂಚಿಸಿ, ವಿಚಾರಣೆ ಮುಂದೂಡಿತು.
ಇದೇ ವೇಳೆ, ಅರ್ಜಿಯಲ್ಲಿ ತಮ್ಮನ್ನೂ ಪ್ರತಿವಾದಿಯಾಗಿಸಬೇಕು ಎಂದು ಕೋರಿ ಮುಂಬೈ ಮೂಲದ ಆನ್‍ಲೈನ್ ರಮ್ಮಿ ಫೌಂಡೇಶನ್ ಮಧ್ಯಂತರ ಅರ್ಜಿ ಸಲ್ಲಿಸಿತು. ಅರ್ಜಿ ವಿಚಾರಣೆಗೆ ಅನುಮತಿಸಿದ ಪೀಠ, ಮಾ.31ರ ಒಳಗೆ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿತು.
ರಮ್ಮಿ ಫೌಂಡೇಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು, ರಮ್ಮಿ ಒಂದು ಕೌಶಲ್ಯದ ಆಟವೇ ಹೊರತು ಜೂಜಲ್ಲ. ಆಟಗಾರರ ಆಸಕ್ತಿಗಳನ್ನು ಫೌಂಡೇಶನ್ ರಕ್ಷಿಸಲಿದೆ. ಇದಕ್ಕೆ ಪರವಾನಿಗೆ ನೀಡಿದರೆ ಶುಲ್ಕ ರೂಪದಲ್ಲಿ ರಾಜ್ಯ ಸರಕಾರಕ್ಕೆ ಕೋಟ್ಯಂತರ ರೂಪಾಯಿ ವರಮಾನವೂ ಬರಲಿದೆ ಎಂದು ವಿವರಿಸಿದರು.
ಗುಜರಾತ್ ಮತ್ತು ತಮಿಳುನಾಡು ರಾಜ್ಯಗಳ ಹೈಕೋರ್ಟ್ ಆನ್‍ಲೈನ್ ಜೂಜು ನಿಯಂತ್ರಿಸಲು ಅಧ್ಯಯನ ನಡೆಸುವಂತೆ ರಾಜ್ಯ ಸರಕಾರಗಳಿಗೆ ಸೂಚನೆ ಕೊಟ್ಟಿವೆ. ಕರ್ನಾಟಕದಲ್ಲಿ ಇದರ ನಿಯಂತ್ರಣಕ್ಕೆ ಮಾರ್ಗಸೂಚಿಗಳಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ತಮಿಳುನಾಡು ಸರಕಾರ ಆನ್‍ಲೈನ್ ಜೂಜನ್ನು ಈಗಾಗಲೇ ನಿಷೇಧಿಸಿದೆ. ಆಂಧ್ರಪ್ರದೇಶ ಸರಕಾರ ಜೂಜನ್ನು ನಿಯಂತ್ರಣ ಮಾಡಲು ಆಂಧ್ರ ಪ್ರದೇಶ ಗೇಮಿಂಗ್ ಬಿಲ್ 2020ಅನ್ನು ವಿಧಾನಸಭೆಯಲ್ಲಿ ಮಂಡಿಸಿ, ಅಂಗೀಕಾರ ಪಡೆದಿದೆ.
ಆನ್‍ಲೈನ್ ಜೂಜಿನಲ್ಲಿ ತೊಡಗಿದ ಅಪರಾಧಿಗಳಿಗೆ 5 ಸಾವಿರ ದಂಡ ಮತ್ತು 1 ವರ್ಷದ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅಪರಾಧ ಮರುಕಳಿಸಿದರೆ 10 ಸಾವಿರ ದಂಡ ಮತ್ತು ಎರಡು ವರ್ಷದ ಜೈಲು ಶಿಕ್ಷೆ ಇದ್ದು, ಇದು ಜಾಮೀನು ರಹಿತ ಅಪರಾಧವಾಗಿದೆ.







