ಜನರನ್ನು ಅರ್ಥಮಾಡಿಕೊಳ್ಳುವ ನಾಯಕರು ಸಮಾಜದಲ್ಲಿ ಚಿರಸ್ಥಾಯಿಯಾಗಿರುತ್ತಾರೆ : ಡಾ.ಗುರುರಾಜ ಕರಜಗಿ
ಕರ್ಣಾಟಕ ಬ್ಯಾಂಕ್ ಸಂಸ್ಥಾಪಕರ ದಿನಾಚರಣೆ

ಮಂಗಳೂರು : ಜನರನ್ನು ಅರ್ಥ ಮಾಡಿಕೊಳ್ಳುವ ಮತ್ತು ಅವರ ಬಗ್ಗೆ ಕಾಳಜಿಯುಳ್ಳ ನಾಯಕರು ಜನರ ಮನಸ್ಸಿನಲ್ಲಿ ದೀರ್ಘ ಕಾಲದವರೆಗೆ ಉಳಿದುಕೊಳ್ಳುತ್ತಾರೆ ಎಂದು ಬೆಂಗಳೂರಿನ ಸ್ರಜನಶೀಲ ಅಧ್ಯಾಪನ ಕೇಂದ್ರದ ಮುಖ್ಯಸ್ಥ ಡಾ.ಗುರುರಾಜ ಕರಜಗಿ ತಿಳಿಸಿದ್ದಾರೆ.
ಅವರು ಇಂದು ಕರ್ಣಾಟಕ ಬ್ಯಾಂಕಿನ ಸಂಸ್ಥಾಪಕರ ದಿನದ ಅಂಗವಾಗಿ ನಗರದಲ್ಲಿರುವ ಬ್ಯಾಂಕಿನ ಪ್ರಧಾನ ಕಚೇರಿಯ ಸಭಾಂಗಣದಲ್ಲಿಂದು ಹಮ್ಮಿಕೊಂಡ ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಭಾಗವಹಿಸಿ ಉಪನ್ಯಾಸ ನೀಡಿದರು.
ಜನರನ್ನು ಅರ್ಥಮಾಡಿಕೊಳ್ಳುವ ನಾಯಕರು ಜನರ ಪ್ರೀತಿ, ಗೌರವಗಳಿಗೆ ಪಾತ್ರರಾಗಿರುತ್ತಾರೆ. ಆ ಕಾರಣದಿಂದ ಡಾ.ಅಬ್ದುಲ್ ಕಲಾಂ ರಂತಹ ನಾಯಕರು ದೇಶದ ಜನರ ಮನಸ್ಸಿನಲ್ಲಿ ದೀರ್ಘ ಕಾಲದವರೆಗೆ ಉಳಿದುಕೊಂಡಿದ್ದಾರೆ. ಜನರಿಗೆ ಹತ್ತಿರವಾಗದ ನಾಯಕರನ್ನು ಜನರು ನೆನಪಿಟ್ಟು ಕೊಳ್ಳುವುದು ಕಡಿಮೆ. ಅದೇ ರೀತಿ ಸಮಾಜದ ಒಳಿತಿಗಾಗಿ ಬದುಕಿದ ಜನರನ್ನು ಜನ ಮರೆಯುವುದಿಲ್ಲ ಎಂದು ಅವರು ಹೇಳಿದರು.
ಬ್ಯಾಂಕಿನ ಅಧ್ಯಕ್ಷ ಪಿ. ಜಯರಾಮ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕಿನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡುತ್ತಾ, ಕೋವಿಡ್ -19ರ ಸಂದರ್ಭದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಿದೆ. ಈ ಸಂದರ್ಭದಲ್ಲೂ ಬ್ಯಾಂಕ್ ತನ್ನ ಗ್ರಾಹಕರಿಗೆ ಸೇವೆ ನೀಡುತ್ತಾ ಬಂದಿದೆ. ಬ್ಯಾಂಕ್ ಕೋರ್ ಬ್ಯಾಂಕಿಂಗ್, ಡಿಜಿಟಲ್ ಸಾಲ ನೀಡಿಕೆ ಯೊಂದಿಗೆ ಆಧುನಿಕ ತಾಂತ್ರಿಕ ಸೌಲಭ್ಯಗಳ ನ್ನು ನೀಡುತ್ತಾ ಬಂದಿದೆ. ಬ್ಯಾಂಕ್ 26.45 ಕೋಟಿ ರೂಗಳನ್ನು ಸುಮಾರು 619 ಯೋಜನೆಗಳಿಗೆ ತನ್ನ ಸಿಎಸ್ ಆರ್ ನಿಧಿಯಿಂದ ವೆಚ್ಚ ಮಾಡಿದೆ. ಬ್ಯಾಂಕ್ ನ್ನು ಕಳೆದ 97 ವರ್ಷಗಳಿಂದ ಮುನ್ನಡೆಸಲು ಕಾರಣರಾದವರು, ವಿಶ್ವದಾದ್ಯಂತ ಕರ್ಣಾಟಕ ಬ್ಯಾಂಕನ್ನು ಬೆಂಬಲಿಸುತ್ತಿರುವ ಗ್ರಾಹಕರನ್ನು ಈ ಸಂದರ್ಭದಲ್ಲಿ ಅಭಿವಂದಿಸುವುದಾಗಿ ಅವರು ತಿಳಿಸಿದ್ದಾರೆ.
ಸಮಾರಂಭದಲ್ಲಿ ಗೋಕುಲ್ ದಾಸ್ ಪೈ ವಂದಿಸಿದರು. ಎಲ್ರಾಯ್ ಮೊನಿಸ್ ಕಾರ್ಯಕ್ರಮ ನಿರೂಪಿಸಿದರು.











