ಫೆ.19ರಿಂದ ರಾಜ್ಯಮಟ್ಟದ ವಿಜ್ಞಾನ ಸಾಹಿತ್ಯ ಕಮ್ಮಟ
ಮಂಗಳೂರು, ಫೆ.18: ಕರ್ನಾಟಕ ಸಾಹಿತ್ಯ ಅಕಾಡಮಿ ಹಾಗೂ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಮಂಗಳೂರು ವತಿಯಿಂದ ಫೆ. 19ರಿಂದ 21ರವರೆಗೆ ನಗರದ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ‘ವಿಜ್ಞಾನ ಸಾಹಿತ್ಯ ಕಮ್ಮಟ’ ಆಯೋಜಿಸಲಾಗಿದೆ ಎಂದು ಅಕಾಡಮಿಯ ರಿಜಿಸ್ಟ್ರಾರ್ ಕರಿಯಪ್ಪ ಎನ್. ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ಲೇಖಕ ಡಾ.ಟಿ.ಆರ್. ಅನಂತರಾಮು ಕಮ್ಮಟ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ.ವಿ. ರಾವ್ ಭಾಗವಹಿಸಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಡಾ.ಬಿ.ವಿ. ವಸಂತ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಮ್ಮಟದ ನಿರ್ದೇಶಕರಾಗಿ ಎಂ.ಎಸ್. ಚೈತ್ರ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಮೂರು ದಿನಗಳ ಕಾಲ ನಾನಾ ವಿಜ್ಞಾನ ವಿಚಾರಗಳ ಕುರಿತು ಉಪನ್ಯಾಸವನ್ನು ಸಂಪನ್ಮೂಲ ವ್ಯಕ್ತಿಗಳು ನೀಡಲಿದ್ದಾರೆ. ರಾಜ್ಯದ ನಾನಾ ಕಡೆಯ 50ಕ್ಕೂ ಹೆಚ್ಚು ಮಂದಿ ಶಿಬಿರಾರ್ಥಿಗಳು ಈ ಕಮ್ಮಟದಲ್ಲಿ ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ. ರಾವ್, ಅಕಾಡಮಿಯ ಸದಸ್ಯ ಸಂಚಾಲಕ ಡಾ. ಬಿ.ಎಂ. ಶರಭೇಂದ್ರಸ್ವಾಮಿ ಉಪಸ್ಥಿತರಿದ್ದರು.





