ತನ್ನದೇ ಆದ ‘ವಾಟ್ಸ್ಯಾಪ್' ಅಭಿವೃದ್ಧಿಗೊಳಿಸುತ್ತಿರುವ ಕೇಂದ್ರ ಸರಕಾರ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಫೆ.18: ವಾಟ್ಸ್ಯಾಪ್ನಲ್ಲಿ ಖಾಸಗಿತನದ ಕುರಿತು ಸೃಷ್ಟಿಯಾಗಿರುವ ವಿವಾದಗಳ ನಡುವೆಯೇ ಕೇಂದ್ರ ಸರಕಾರವು ತನ್ನದೇ ಆದ ಮೆಸೇಜಿಂಗ್ ಆ್ಯಪ್ ಅಭಿವೃದ್ಧಿಗೊಳಿಸಿದೆ.
ವಾಟ್ಸಾಪ್ನಂತೆಯೇ ಕಾರ್ಯ ನಿರ್ವಹಿಸುವ ಎರಡು ಇನ್ಸ್ಟಂಟ್ ಮೆಸೇಜಿಂಗ್ ಆ್ಯಪ್ಗಳನ್ನು ಅವುಗಳ ಬೀಟಾ ಹಂತದಲ್ಲಿ ಪರೀಕ್ಷಿಸಲಾಗುತ್ತಿದ್ದು,ಇವುಗಳಿಗೆ ‘ಸಂವಾದ ’ ಮತ್ತು ‘ಸಂದೇಶ ’ಎಂದು ಸಂಕೇತ ನಾಮಗಳನ್ನು ನೀಡಲಾಗಿದೆ ಎಂದು ವಿದ್ಯುನ್ಮಾನ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಅಧಿಕಾರಿಯೋರ್ವರು ತಿಳಿಸಿದರು.
ಸರಕಾರವು ಕೇಂದ್ರ ಸರಕಾರಿ ನೌಕರರು ಮಾತ್ರ ಸಂವಹನ ನಡೆಸಲು ‘ಗಿಮ್ಸ್ (ಗವರ್ನಮೆಂಟ್ ಇನ್ಸ್ಟಂಟ್ ಮೆಸೇಜಿಂಗ್ ಸರ್ವಿಸ್)’ ಹೆಸರಿನ ಆ್ಯಪ್ ಅನ್ನು ಸಹ ಹೊಂದಲು ಉದ್ದೇಶಿಸಿದೆ ಎನ್ನಲಾಗಿದೆ.
‘ನಮ್ಮ ಸ್ವಂತದ ಮತ್ತು ಸ್ವತಂತ್ರವಾದ ಇನ್ಸ್ಟಂಟ್ ಮೆಸೇಜಿಂಗ್ ಆ್ಯಪ್ ಹೊಂದುವ ಆಲೋಚನೆ ತುಂಬ ಸಮಯದಿಂದಲೂ ಸರಕಾರಕ್ಕಿತ್ತು. ವಾಟ್ಸ್ಯಾಪ್ ವಿವಾದ ಆರಂಭಗೊಳ್ಳುವ ಮೊದಲೇ ಈ ಆ್ಯಪ್ಗಳನ್ನು ಅಭಿವೃದ್ಧಿಗೊಳಿಸುವ ಕೆಲಸ ಪ್ರಾರಂಭಗೊಂಡಿತ್ತು’ ಎಂದು ಸಚಿವಾಲಯದ ಮೂಲಗಳು ತಿಳಿಸಿದವು.
‘ಡಾಟಾ ಕಳ್ಳತನವಾಗುವ ಮತ್ತು ಕಂಪನಿಯಿಂದ ಲಾಭಗಳಿಕೆಗಾಗಿ ಡಾಟಾ ಬಳಕೆಯ ಬಗ್ಗೆ ನಾವೆಂದೂ ಚಿಂತಿಸಬೇಕಿಲ್ಲ ಎನ್ನುವುದು ಈ ಆ್ಯಪ್ನ ಅತ್ಯಂತ ದೊಡ್ಡ ಲಾಭವಾಗಲಿದೆ ’ ಎಂದು ಅವು ಹೇಳಿದವು.
ಆದರೆ ಜನರು ಈ ಆ್ಯಪ್ನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದು ಸಾರ್ವಜನಿಕ ಬಳಕೆಗಾಗಿ ಬಿಡುಗಡೆಗೊಳಿಸಿದ ಮೇಲೆಯೇ ಗೊತ್ತಾಗಬೇಕಿದೆ. ಸಂದೇಶ ಮತ್ತು ಸಂವಾದ ಇವೆರಡೂ ಆ್ಯಪ್ಗಳನ್ನು ಅಥವಾ ಒಂದನ್ನು ಮಾತ್ರ ಸಾರ್ವಜನಿಕ ಬಳಕೆಗೆ ನೀಡಲಾಗುವುದೇ ಎನ್ನುವುದು ಸ್ಪಷ್ಟವಾಗಿಲ್ಲ.
ಪರೀಕ್ಷೆ ನಡೆಸಲು ಕೆಲವು ಜನರಿಗಷ್ಟೇ ಸಂದೇಶ ಆ್ಯಪ್ ಆ್ಯಪಲ್ ಸ್ಟೋರ್ನಲ್ಲಿ ಲಭ್ಯವಿದೆ. ನೀಲಿ ಮತ್ತು ಹಸಿರು ಇಂಟರ್ಫೇಸ್ ಹೊಂದಿರುವ ಈ ಆ್ಯಪ್ನಲ್ಲಿ ಲಾಂಛನವಾಗಿ ಅಶೋಕ ಚಕ್ರವನ್ನು ಬಳಸಲಾಗಿದೆ. ಸದ್ಯಕ್ಕೆ ಸರಕಾರಿ ನೌಕರರು ಮಾತ್ರ ಅದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.







