ಉಡುಪಿ ಜಿಲ್ಲಾ ಲೆಕ್ಕಪರಿಶೋಧಕರ ಸಂಘದಿಂದ ‘ಜ್ಞಾನ ಸಮ್ಮೇಳನ’
ಉಡುಪಿ, ಫೆ.18: ಭಾರತ ಲೆಕ್ಕಪರಿಶೋಧಕರ ಸಂಸ್ಥೆಯ (ಐಸಿಎಐ) ಉಡುಪಿ ಜಿಲ್ಲಾ ಶಾಖೆಯ ವತಿಯಿಂದ ಇದೇ ಫೆ.20ರ ಶನಿವಾರದಂದು ‘ಜ್ಞಾನ ಸಮ್ಮೇಳನ-2021’ ವಾರ್ಷಿಕ ಸಮಾವೇಶ ನಡೆಯಲಿದೆ ಎಂದು ಜಿಲ್ಲಾ ಶಾಖೆಯ ಅಧ್ಯಕ್ಷ ಸಿಎ ಪ್ರದೀಪ್ ಜೋಗಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನವನ್ನು ಬೆಳಗ್ಗೆ 9:30ಕ್ಕೆ ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಉದ್ಘಾಟಿಸಲಿದ್ದಾರೆ. ಬೆಂಗಳೂರು ಐಸಿಎಐನ ಸಿಸಿಎಂ ಎಂ.ಪಿ.ವಿಜಯಕುಮಾರ್ ಹಾಗೂ ಮಂಗಳೂರು ಶಾಖೆಯ ಅಧ್ಯಕ್ಷ ಎಸ್.ಎಸ್.ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲೆಯ ಮೂವರು ಹಿರಿಯ ಲೆಕ್ಕಪರಿಶೋಧಕರಾದ ಸಾಯಿರಾಮ್, ಗುರುದಾಸ ಶೆಣೈ ಹಾಗೂ ರೇಖಾ ದೇವಾನಂದ ಅವರನ್ನು ಸನ್ಮಾನಿಸಲಾಗುವುದು. ಅಲ್ಲದೇ ಈ ಬಾರಿ ಉಡುಪಿ ಶಾಖೆಯಿಂದ ಸಿಎ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ 20 ಮಂದಿಯನ್ನು ಗೌರವಿಸಲಾಗುವುದು ಎಂದವರು ಹೇಳಿದರು.
ಉದ್ಘಾಟನಾ ಸಮಾರಂಭದ ಬಳಿಕ ಎಂ.ಪಿ. ವಿಜಯಕುಮಾರ್ ಅವರು ‘ಲೆಕ್ಕಪರಿಶೋಧಕ ವೃತ್ತಿಯ ಭವಿಷ್ಯ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಆ ಬಳಿಕ ಐದು ತಾಂತ್ರಿಕ ಸೆಷನ್ಸ್ ನಡೆಯಲಿದ್ದು, ಸಂಜೆ 5:00ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಲೋಕೇಶ್ ಶೆಟ್ಟಿ, ಕವಿತಾ ಎಂ.ಪೈ, ನರಸಿಂಹ ನಾಯಕ್ ಹಾಗೂ ಗುಜ್ಜಾಡಿ ಪ್ರಭಾಕರ ನಾಯಕ್ ಉಪಸ್ಥಿತರಿದ್ದರು.







