ರಾಜ್ಯದ ಬಾಲಭವನದ ಉನ್ನತೀಕರಣಕ್ಕೆ ಯೋಜನೆ: ಚಿಕ್ಕಮ್ಮ ಬಸವರಾಜ್

ಉಡುಪಿ, ಫೆ.18: ರಾಜ್ಯದ 30 ಜಿಲ್ಲೆಗಳಲ್ಲಿರುವ ಬಾಲಭವನದ ಉನ್ನತೀಕರಣಕ್ಕೆ ಯೋಜನೆಗಳನ್ನು ರೂಪಿಸಿ ಅದನ್ನು ಅನುಷ್ಠಾನಗೊಳಿಸುವ ಮೂಲಕ ಅಲ್ಲಿ ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯಗಳು ದೊರೆಯುವಂತೆ ಮಾಡಲು ಆದ್ಯತೆ ನೀಡಲಾಗುವುದು ಎಂದು ರಾಜ್ಯ ಬಾಲಭವನ ಸೊಸೈಟಿಯ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜ್ ತಿಳಿಸಿದ್ದಾರೆ.
ಉಡುಪಿ ಬ್ರಹ್ಮಗಿರಿಯಲ್ಲಿರುವ ಬಾಲಭವನಕ್ಕೆ ಭೇಟಿ ನೀಡಿ, ಅಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿ ಚಟುವಟಿಕೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿಗಳನ್ನು ಪಡೆದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.
ಕೋವಿಡ್ ಕಾರಣದಿಂದ ಕಳೆದೊಂದು ವರ್ಷದಿಂದ ಬಾಲಭವನದಲ್ಲಿ ಮಕ್ಕಳ ಯಾವುದೇ ಕಾರ್ಯಕ್ರಮ, ಚಟುವಟಿಕೆಗಳು ನಡೆಯುತ್ತಿಲ್ಲ. ಈಗ ಶಾಲೆಗಳು ಸೇರಿದಂತೆ ಹೆಚ್ಚಿನೆಲ್ಲಾ ಚಟುವಟಿಕೆಗಳು ಪುನರಾರಂಭಗೊಂಡಿರುವುದರಿಂದ ಬಾಲಭವನದ ಚಟುವಟಿಕೆಗಳನ್ನು ಪ್ರಾರಂಭಿಸಲು ಅನುಮತಿ ನೀಡುವಂತೆ ಸರಕಾರವನ್ನು ಕೇಳಲಾಗಿದೆ. ಅದು ದೊರೆಯುತಿದ್ದಂತೆ ಹಿಂದಿನಂತೆ ಎಲ್ಲಾ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು ಎಂದರು.
ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡುವ ಕಲಾಶ್ರೀಯನ್ನು ಪುನರಾರಂಭಿಸಬೇಕಿದೆ. ಪ್ರತಿ ಶಾಲೆಗಳಿಗೂ ಬೇಟಿ ನೀಡಿ ತೀರಾ ಬಡ, ಹಿಂದುಳಿದ ಮಕ್ಕಳನ್ನು ಬಾಲಭವನಕ್ಕೆ ಬರುವಂತೆ ನೋಡಿಕೊಳ್ಳಿ. ಇಲ್ಲಿರುವ ಸೌಲಭ್ಯಗಳನ್ನು ಇನ್ನಷ್ಟು ಹೆಚ್ಚಿಸಬೇಕಾಗಿದೆ. 1.02 ಎಕರೆ ಪ್ರದೇಶದಲ್ಲಿರುವ ಬಾಲಭವನದ ಆವರಣದಲ್ಲಿ ಹೂಗಿಡಗಳನ್ನು ಬೆಳೆಸಿ, ಇನ್ನಷ್ಟು ಮಕ್ಕಳ ಆಟಿಕೆಗಳನ್ನು ಅಳವಡಿಸಬೇಕಾಗಿದೆ. ತುಕ್ಕು ಹಿಡಿದಿರುವ ಜಾರುಬಂಡಿ, ಜೋಕಾಲಿಗಳನ್ನು ಬದಲಿಸಬೇಕು ಎಂದರು.
ಇಲ್ಲಿ ಇನ್ನಷ್ಟು ಸೌಲಭ್ಯ ಒದಗಿಸಬೇಕಾದ ಬೇಕಾದ ಆರ್ಥಿಕ ನೆರವಿಗೆ ಪ್ರಸ್ತಾಪವನ್ನು ಕಳುಹಿಸಿ. ವಿವಿಧ ಕಾರ್ಯಕ್ರಮಗಳ ಆಯೋಜನೆಗೂ ಸಿದ್ಧತೆ ಮಾಡಿಕೊಳ್ಳಿ. ಕೋವಿಡ್ ಸಂದರ್ಭದಲ್ಲಿ ಕೊಟ್ಟ ಅನುದಾನ ಹಾಗೆ ಉಳಿದಿದೆ. ಅವುಗಳನ್ನು ಬಳಸಿಕೊಳ್ಳಬಹುದು ಎಂದರು.
ಕಳೆದ ವರ್ಷ ಬಜೆಟ್‌ನಲ್ಲಿ ರಾಜ್ಯ ಬಾಲಭವನಕ್ಕೆ 10 ಕೋಟಿ ರೂ.ನೀಡಲಾಗಿತ್ತು. ಈ ಬಾರಿ 17 ಕೋಟಿ ರೂ.ಗಳ ಬೇಡಿಕೆಯನ್ನು ಸಲ್ಲಿಸಿದ್ದೇವೆ. ಇದರಿಂದ ಜಿಲ್ಲಾ ಮತ್ತು ತಾಲೂಕು ಮಟ್ಟದ ಚಟುವಟಿಕೆಗಳನ್ನು ಪುನರಾಂಭಿಸಲಾಗುವುದು. ಅಲ್ಲದೇ ತಾಲೂಕು ಮಟ್ಟದಲ್ಲಿ ಬಾಲಭವನ ನಿರ್ಮಾಣಕ್ಕೆ ಸ್ವಂತ ಜಾಗ ಪಡೆದರೆ ಅಲ್ಲಿ ಕಟ್ಟಡ ನಿರ್ಮಾಣಕ್ಕೆ ಆನುದಾನ ಒದಗಿಸಲಾಗುವುದು. ರಾಜ್ಯದಲ್ಲೀಗ 18 ಜಿಲ್ಲೆಗಳಲ್ಲಿ ಸ್ವಂತ ಕಟ್ಟಡದಲ್ಲಿ ಬಾಲಭವನ ನಡೆಯುತ್ತಿದೆ. ಉಳಿದ 12 ಕಡೆಗಳಲ್ಲಿ ಜಿಲ್ಲಾಡಳಿತದ ಮೂಲಕ ಸ್ವಂತ ಜಮೀನು ಹೊಂದಲು ತಿಳಿಸಿದ್ದೇವೆ ಎಂದು ಚಿಕ್ಕಮ್ಮ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶೇಷಪ್ಪ ಆರ್., ಜಿಲ್ಲಾ ಶಿಶು ಅಭಿವೃದ್ಧಿ ಅಧಿಕಾರಿ ವೀಣಾ, ಚಂದ್ರಿಕಾ, ರಮ್ಯ ಉಪಸ್ಥಿತರಿದ್ದರು.







