ಜನಸಾಗರ ನೋಡಿ ಸಿದ್ದರಾಮಯ್ಯರಿಗೆ ಕಿರಿಕಿರಿ: ಸಚಿವ ಕೆ.ಎಸ್.ಈಶ್ವರಪ್ಪ

File Photo
ಬೆಂಗಳೂರು, ಫೆ. 18: ಮೊದಲಿಗೆ ಕುರುಬರ ಎಸ್ಟಿ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದ ಸಿದ್ದರಾಮಯ್ಯ, ಆ ಬಳಿಕ ಕುರುಬರ ಚಳವಳಿಗೆ ಆರೆಸೆಸ್ಸ್ ಹಣ ನೀಡಿದೆ ಎಂದು ಆರೋಪಿಸಿದ್ದಾರೆ. ಆದರೆ, ಆರೆಸೆಸ್ಸ್ ಹಣವನ್ನು ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿರುವ ಸಚಿವ ಕೆ.ಎಸ್.ಈಶ್ವರಪ್ಪ, ಸಮಾವೇಶಕ್ಕೆ ಹರಿದುಬಂದ ಜನಸಾಗರ ನೋಡಿ ಸಿದ್ದರಾಮಯ್ಯನವರಿಗೆ ಕಿರಿಕಿರಿಯಾಗಿದೆ ಎಂದು ಟೀಕಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕುರುಬರ ಎಸ್ಟಿ ಹೋರಾಟದಲ್ಲಿ ಬೇರೆ ಪಕ್ಷಗಳ ನಾಯಕರು ಇದ್ದಾರೆ. ಆದರೆ, ಸಿದ್ದರಾಮಯ್ಯ ನನ್ನ ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದಾರೆ ಎಂದು ಇದೇ ವೇಳೆ ಆಕ್ಷೇಪಿಸಿದರು.
ಜಾತಿ ಜನಗಣತಿ ವರದಿಯನ್ನು ತಮ್ಮ ಅವಧಿಯಲ್ಲಿ ಬಿಡುಗಡೆ ಮಾಡಲಿಲ್ಲ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರದ ಅವಧಿಯಲ್ಲಿಯೂ ಬಿಡುಗಡೆ ಮಾಡಲಿಲ್ಲ. ಆದರೆ, ಇದೀಗ ನಮ್ಮ ಸರಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆಂದು ಟೀಕಿಸಿದ ಈಶ್ವರಪ್ಪ, ದೇಶದಲ್ಲಿ ಕಾಂಗ್ರೆಸ್ ಎಪ್ಪತ್ತು ವರ್ಷಗಳಿಂದ ಅಧಿಕಾರ ನಡೆಸಿದೆ. ಆದರೂ ಮೀಸಲಾತಿ ಕಲ್ಪಿಸಲಿಲ್ಲ ಎಂದರು.
ಸಿದ್ದರಾಮಯ್ಯನವರೇ ಬಹಳ ವರ್ಷಗಳಿಂದಲೂ ಅಧಿಕಾರದಲ್ಲಿದ್ದರೂ ಅವರು ಮೀಸಲಾತಿ ಬಗ್ಗೆ ಚಕಾರವೆತ್ತಲಿಲ್ಲ. ಇದೀಗ ರಾಜ್ಯದ ಮನೆ ಮನೆಗಳಿಂದ ಕುರುಬ ಸಮುದಾಯದ ಜನರು ಮೀಸಲಾತಿ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಇದೀಗ ಹೋರಾಟದ ಬಗ್ಗೆ ಸಿದ್ದರಾಮಯ್ಯ ಆಕ್ಷೇಪವೆತ್ತಿದ್ದಾರೆ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.







