ಟೂಲ್‌ಕಿಟ್ ಪ್ರಕರಣ: ದಿಲ್ಲಿ ಹೈಕೋರ್ಟ್‌ಗೆ ದಿಶಾ ರವಿ ಅರ್ಜಿ

ಹೊಸದಿಲ್ಲಿ, ಫೆ.18: ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸುವ ಟೂಲ್‌ಕಿಟ್ ಪ್ರಕರಣದಲ್ಲಿ ಬಂಧಿತರಾಗಿರುವ ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿ, ತನಿಖೆಗೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡದಂತೆ ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ದಿಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ವಾಟ್ಸ್ಆ್ಯಪ್‌ನಲ್ಲಿ ತಾನು ನಡೆಸಿದ ಖಾಸಗಿ ಸಂಭಾಷಣೆ ಸೇರಿದಂತೆ ತನಿಖೆಗೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ಮಾಧ್ಯಮಗಳಿಗೆ ಮಾಹಿತಿ ನೀಡಬಾರದು ತನ್ನ ವಾಟ್ಸ್ಆ್ಯಪ್ ಸಂಭಾಷಣೆ ವಿಷಯದಲ್ಲಿ ಟಿವಿ ವಾಹಿನಿಗಳಲ್ಲಿ ಚರ್ಚೆ ನಡೆಸುವುದನ್ನು ನಿಷೇಧಿಸಬೇಕು , ಮೂರನೇ ವ್ಯಕ್ತಿಗಳೊಂದಿಗೆ ತಾನು ನಡೆಸಿದ ಖಾಸಗಿ ಸಂಭಾಷಣೆಯ ವಿವರವನ್ನು ಪ್ರಸಾರ ಮಾಡುವ ಮೂಲಕ ಕೇಬಲ್ ಟಿವಿ ನೆಟ್‌ವರ್ಕ್ ನಿಯಮ ಉಲ್ಲಂಘಿಸಿದ ನ್ಯೂಸ್ 18, ಇಂಡಿಯಾ ಟುಡೆ ಮತ್ತು ಟೈಮ್ಸ್ ನೌ ಟಿವಿ ವಾಹಿನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ತನ್ನ ವಿರುದ್ಧದ ಆರೋಪದ ವಿಚಾರಣೆ ಮುಕ್ತಾಯವಾಗುವವರೆಗೆ ತನ್ನ ಖಾಸಗಿ ಸಂಭಾಷಣೆ ಹಾಗೂ ಸಂದೇಶಗಳನ್ನು ಪ್ರಸಾರ ಮಾಡದಂತೆ ಖಾಸಗಿ ಸೆಟಿಲೈಟ್ ಟಿವಿ ವಾಹಿನಿಗಳಿಗೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ತನಿಖೆಯ ವಿಷಯಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡುವುದು ಕಾನೂನು ಬಾಹಿರವಾಗಿದೆ ಮತ್ತು ಖಾಸಗಿತನದ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ ಮತ್ತು ಪೂರ್ವಾಗ್ರಹ ಪೀಡಿತ ಭಾವನೆ ಮೂಡಿಸಿ ನ್ಯಾಯಯುತ ವಿಚಾರಣೆಯ ಹಕ್ಕನ್ನು ನಿರಾಕರಿಸುತ್ತದೆ ಎಂದು ದಿಶಾ ರವಿ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಅರ್ಜಿಗೆ ಪ್ರತಿಕ್ರಿಯಿಸಿದ ದಿಲ್ಲಿ ಪೊಲೀಸರ ಮತ್ತು ಮಾಹಿತಿ, ಪ್ರಸಾರ ಇಲಾಖೆಯ ಪರ ವಕೀಲ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮಾಧ್ಯಮದ ಗಮನ ಸೆಳೆಯಲು ಸಲ್ಲಿಸಿರುವ ಅರ್ಜಿ ಇದಾಗಿದೆ ಎಂದು ಟೀಕಿಸಿದ್ದಾರೆ. ಪೊಲೀಸರು ಯಾವುದೇ ಮಾಹಿತಿ ಸೋರಿಕೆ ಮಾಡಿಲ್ಲ ಎಂಬ ಬಗ್ಗೆ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸುವುದಾಗಿ ಮೆಹ್ತಾ ಹೇಳಿದ್ದಾರೆ.







