ಭೀಕರ ಹಿಮಾಘಾತಕ್ಕೆ ನಲುಗಿದ ಟೆಕ್ಸಾಸ್: ಹೆಪ್ಪುಗಟ್ಟಿದ ವಸ್ತುಗಳು, ಜನಜೀವನ ಅಸ್ತವ್ಯಸ್ತ
27 ಲಕ್ಷ ಮನೆಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತ

ಹ್ಯೂಸ್ಟನ್ (ಅಮೆರಿಕ), ಫೆ. 18: ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿ ಭೀಕರ ಶೀತಲ ಮಾರುತ ಬೀಸುತ್ತಿದ್ದು ಎಲ್ಲವೂ ಹೆಪ್ಪುಗಟ್ಟಿದೆ ಹಾಗೂ ಜನಜೀವನ ಅಸ್ತವ್ಯಸ್ತಗೊಂಡಿದೆ. ಲಕ್ಷಾಂತರ ಜನರು ಶಾಖವಿಲ್ಲದೆ ಬುಧವಾರ ನಿರಂತರ ಮೂರನೇ ದಿನವನ್ನು ಕಳೆದರು ಎಂದು ತಿಳಿದು ಬಂದಿದೆ.
ವಾರಾಂತ್ಯದವರೆಗೂ ವಿದ್ಯುತ್ ಪೂರೈಕೆ ಸಾಧ್ಯವಾಗಲಾರದು ಹಾಗೂ ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಿ ಎಂಬುದಾಗಿ ಅಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಸುಮಾರು 1.2 ಕೋಟಿಗೂ ಅಧಿಕ ಜನರಿಗೆ ನಳ್ಳಿಯಲ್ಲಿ ಕುಡಿಯುವ ನೀರು ಬರುತ್ತಿಲ್ಲ ಅಥವಾ ನೀರು ಪೂರೈಕೆಯಲ್ಲಿ ಪದೇ ಪದೇ ವ್ಯತ್ಯಯವಗುತತಿದೆ.
27 ಲಕ್ಷ ಮನೆಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ. ಶೀತಲ ವಾತಾವರಣವು ವಾರಂತ್ಯದವರೆಗೂ ಮುಂದುವರಿಯಲಿದೆ ಎಂಬ ಭೀತಿಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಟೆಕ್ಸಾಸ್ ರಾಜ್ಯವು ತನ್ನ ವಿದ್ಯುತ್ ಉತ್ಪಾದನೆಯ 40 ಶೇಕಡ ಸಾಮರ್ಥ್ಯವ್ಯವನನ್ನು ಕಳೆದುಕೊಂಡಿದೆ. ನೈಸರ್ಗಿಕ ಅನಿಲ ಬಾವಿಗಳು, ಪೈಪ್‌ಲೈನ್‌ಗಳು ಮತ್ತು ಗಾಳಿಯಂತ್ರಗಳು ಶೀತದಿಂದಾಗಿ ಮರಗಟ್ಟಿಹೋಗಿದ್ದು ಕೆಲಸ ಮಾಡದೆ ನಿಂತಿವೆ.
ಎಲುಬು ಕೊರೆಯು ಚಳಿಯಿಂದಾಗಿ ಸುಮಾರು 25 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕೃತವಾಗಿ ದಾಖಲಾಗಿದೆ. ಆದರೆ, ಮೃತರ ಸಂಖ್ಯೆ ತುಂಬಾ ಹೆಚ್ಚಾಗಿರಬಹುದು ಎನ್ನಲಾಗಿದೆ.







