ಫೆ. 25ರಂದು ಬೀಡಿ ಕಾರ್ಮಿಕರಿಂದ ಪ್ರತಿಭಟನೆ

ಮಂಗಳೂರು, ಫೆ. 18: ಕೋಟ್ಪಾ ಕಾಯಿದೆಗೆ ತಿದ್ದುಪಡಿಯಿಂದ ಬೀಡಿ ಕಾರ್ಮಿಕರ ಬದುಕು ಮತ್ತಷ್ಟು ದುಸ್ಥರವಾಗಲಿದೆ ಎಂದು ಆರೋಪಿಸಿ ಜಿಲ್ಲೆಯ ಕಾರ್ಮಿಕ ಹಾಗೂ ಇತರ ಜನಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಬೀಡಿ ಕಾರ್ಮಿಕರು ಫೆ. 25ರಂದು ಮೆರವಣಿಗೆ ಹಾಗು ಪ್ರತಿಭಟನಾ ಸಭೆ ನಡೆಸಲಿದ್ದಾರೆ.
ದ.ಕ. ಜಿಲ್ಲಾ ವಿವಿಧ ಬೀಡಿ ಗುತ್ತಿಗೆದಾರ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಸಿಐಟಿಯು ಅಧ್ಯಕ್ಷ ವಸಂತ ಆಚಾರಿ, ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಸೃಷ್ಟಿಸದೆ ಇದೀಗ ಕೋಟ್ಪಾ ಕಾಯ್ದೆಗೆ ಮತ್ತಷ್ಟು ತಿದ್ದುಪಡಿಗಳ ಮೂಲಕ ಕಾರ್ಮಿಕರನ್ನು ಬೀದಿ ಪಾಲು ಮಾಡಲು ಕೇಂದ್ರ ಹಾಗೂ ರಾಜ್ಯ ಸರಾರ ಮುಂದಾಗಿದೆ ಎಂದು ದೂರಿದರು.
ಈಗಾಗಲೇ 2003ರಲ್ಲಿ ಕೇಂದ್ರ ಸರಕಾರ ಜಾರಿಗೆ ತಂದ ಕೋಟ್ಪಾ ಕಾಯಿದೆಯಿಂದ ಸಿಗರೇಟು ಮತ್ತು ತಂಬಾಕು ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ಸಂಬಂಧಿಸಿ ಹಲವಾರು ಬಗಯ ನಿಯಂತ್ರಣ ಮಾಡಿರುವುದರಿಂದ ಬೀಡಿ ಕಾರ್ಮಿಕರ ಮೇಲೆ ಈಗಾಗಲೇ ದುಷ್ಪರಿಣಾಮ ಬಿದ್ದಿದೆ. ವಾರದಲ್ಲಿ ಕೇವಲ ಎರಡು ಕೆಲಸ ಪಡೆಯುತ್ತಿರುವ ಬೀಡಿ ಕಾರ್ಮಿಕರ ಸಂಕಷ್ಟವನ್ನೇ ಕೇಳುವವರು ಇಲ್ಲದಾಗಿದೆ. ಇದೀಗ ಕಾಯಿದೆಗೆ ಹೊಸ ತಿದ್ದುಪಡಿಯ ಪ್ರಕಾರ ಮತ್ತಷ್ಟು ನಿಯಂತ್ರಣಗಳನ್ನು ಅನುಷ್ಠಾನಗೊಳಿಸುವುದರಿಂದ ಇದರ ಭೀಕರ ಪರಿಣಾಮವನ್ನು ಬೀಡಿ ಕಾರ್ಮಿಕರು ಎದುರಿಸಬೇಕಾಗಿದೆ. ಆದ್ದರಿಂದ ಈ ತಿದ್ದುಪಡಿಯನ್ನು ವಿರೋಧಿಸಿ 25ರಂದು ಬೆಳಗ್ಗೆ 10.30ರಿಂದ ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದವರೆಗೆ ಮೆರವಣಿಗೆ ಬಳಿಕ ಪ್ರತಿಭಟನಾ ಸಭೆ ನಡೆಯಲಿದೆ.
ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗವನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಮುಂದಾಗಬೇಕು. ಅಲ್ಲಿಯವರೆಗೆ ಕೋಟ್ಪಾ ಕಾಯ್ದೆಗೆ ತಿದ್ದುಪಡಿ ತರಬಾರದು. ಬೀಡಿಗೆ ಜಿಎಸ್‌ಟಿ ಹಾಕಬಾರದು. ಹಾಕುವುದಾದರೆ ಆ ಹಣದ ಪಾಲನ್ನು ಬೀಡಿ ಕಾರ್ಮಿಕರ ಕಲ್ಯಾಣ ಮಂಡಳಿಗೆ ನೀಡಬೇಕು. ಎಲ್ಲಾ ಬೀಡಿ ಕಾರ್ಮಿಕರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕೊರೋನ ಲಾಕ್‌ಡೌನ್ ಪರಿಹಾರ ಘೋಷಿಸಬೇಕು ಎಂಬ ಬೇಡಿಕೆಗಳನ್ನು ಒಳಗೊಂಡು ಪ್ರಧಾನಿ ಹಾಗೂ ಕೇಂದ್ರ ಆರೋಗ್ಯ ಸಚಿವರಿಗೆ ಕಾರ್ಮಿಕರ ಸಹಿ ಸಂಗ್ರಹ ಮಾಡಿ ಕಳುಹಿಸಲಾಗಿದೆ. ಇದೀಗ ಎರಡನೆ ಹಂತದ ಕಾರ್ಯಕ್ರಮವಾಗಿ ಈ ಪ್ರತಿಭಟನೆ ನಡೆಯಲಿದೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಸಿಐಟಿಯು ಕಾರ್ಯದರ್ಶಿ ಜೆ. ಬಾಲಕೃಷ್ಣ ಶೆಟ್ಟಿ, ಎಚ್‌ಎಂಎಸ್‌ನ ಗೌರವಾಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ಅಧ್ಯಕ್ಷ ಮುಹಮ್ಮದ್ ರಫಿ, ಕಾರ್ಯದರ್ಶಿ ಹರೀಶ್ ಕೆ.ಎಸ್., ಎಐಟಿಯುಸಿಯ ಕಾರ್ಯದರ್ಶಿ ಸೀತಾರಾಮ ಬೇರಿಂಜ, ಕೋಶಾಧಿಕಾರಿ ಶೇಖರ ಬಿ. ಮೊದಲಾದವರು ಉಪಸ್ಥಿತರಿದ್ದರು.







