ಡಿಎಸ್‌ಎಸ್‌ಎಸ್‌ಬಿ ಪರೀಕ್ಷೆ: ಜಾತಿ ಆಧಾರಿತ ಪ್ರಶ್ನೆಯಿದ್ದರೆ ಎಫ್‌ಐಆರ್ ದಾಖಲಿಸಲು ಸೂಚನೆ
ಹೊಸದಿಲ್ಲಿ, ಫೆ.18: ದಿಲ್ಲಿ ಅಧೀನ ಸೇವಾ ಆಯ್ಕೆ ಮಂಡಳಿ(ಡಿಎಸ್‌ಎಸ್‌ಎಸ್‌ಬಿ)ಯು ಪ್ರಾಥಮಿಕ ಶಿಕ್ಷಕರ ಆಯ್ಕೆಗೆ ನಡೆಸುವ ಪರೀಕ್ಷೆಯಲ್ಲಿ ಜಾತಿ ಆಧಾರಿತ ಪ್ರಶ್ನೆಯಿದ್ದರೆ ದಲಿತ ದೌರ್ಜನ್ಯ ಕಾಯ್ದೆಯಡಿ ಎಫ್‌ಐಆರ್ ದಾಖಲಿಸುವಂತೆ ದಿಲ್ಲಿಯ ನ್ಯಾಯಾಲಯ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದೆ.
2018 ಮತ್ತು 2019ರ ಪ್ರಶ್ನೆಪತ್ರಿಕೆಯಲ್ಲಿ ಕೆಲವು ಪದಗಳು ಮೇಲ್ನೋಟಕ್ಕೆ ಸಂಜ್ಞೆಯ ಅಪರಾಧ(ದಂಡಾಧಿಕಾರಿಯ ಅಪ್ಪಣೆಯಿಲ್ಲದೆ ಪೊಲೀಸರು ಬಂಧಿಸಬಹುದಾದ ಅಪರಾಧ) ಎಂದು ಕಂಡುಬಂದಿರುವುದಾಗಿ ಎಡಿಷನಲ್ ಸೆಷನ್ಸ್ ಕೋರ್ಟ್‌ನ ನ್ಯಾಯಾಧೀಶ ರವೀಂದರ್ ಬೇಡಿ ಹೇಳಿದ್ದಾರೆ. ಈ ಬಗ್ಗೆ ತನಿಖೆಯ ಅಗತ್ಯವಿದೆ. 2019ರ ಸೆಪ್ಟಂಬರ್‌ನಲ್ಲಿ ತನಿಖಾಧಿಕಾರಿ ಸಲ್ಲಿಸಿದ ವರದಿಯನ್ನು ಗಮನಿಸಿದ್ದೇನೆ ಮತ್ತು ಈ ಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದವರ ವಿವರ ಒದಗಿಸುವಂತೆ ನ್ಯಾಯಾಲಯದ ಪುನರಾದೇಶದ ಹೊರತಾಗಿಯೂ ಮಾಹಿತಿಯನ್ನು ಮರೆಮಾಚಲು ಮಂಡಳಿ ನಡೆಸಿರುವ ಪ್ರಯತ್ನ ಗಮನಕ್ಕೆ ಬಂದಿದೆ ಎಂದು ನ್ಯಾ. ರವೀಂದರ್ ಬೇಡಿ ಹೇಳಿದರು.
ಪ್ರಶ್ನೆಪತ್ರಿಕೆ ಸಿದ್ಧಪಡಿಸಲು ಮತ್ತು ಪುನರ್‌ಪರಿಶೀಲನೆಗೆ ಡಿಎಸ್‌ಎಸ್‌ಎಸ್‌ಬಿ ಆಂತರಿಕ ವ್ಯವಸ್ಥೆಯನ್ನು ಹೊಂದಿಲ್ಲ ಎಂಬ ಹೇಳಿಕೆ ಬಗ್ಗೆಯೂ ನ್ಯಾಯಾಧೀಶರು ಆಕ್ಷೇಪ ಸೂಚಿಸಿದರು. 2018ರ ನವೆಂಬರ್‌ನಿಂದಲೂ ಪ್ರಕರಣ ಇತ್ಯರ್ಥವಾಗಿಲ್ಲ ಮತ್ತು ಎಸಿಪಿ/ ಅಧಿಕಾರಿಗಳು ಪ್ರಶ್ನೆಪತ್ರಿಕೆ ಸಿದ್ಧಪಡಿಸಿದವರ ಹೆಸರು ಮತ್ತು ವಿವರವನ್ನು ಪತ್ತೆಹಚ್ಚುವಲ್ಲಿಯೂ ವಿಫಲವಾಗಿದ್ದಾರೆ ಎಂದು ಹೇಳಿದ ನ್ಯಾಯಾಧೀಶರು, ನ್ಯಾಯಾಲಯದಲ್ಲಿ ಹಾಜರಾಗಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದವರ ವಿವರ ಒದಗಿಸುವಂತೆ ಡಿಎಸ್‌ಎಸ್‌ಎಸ್‌ಬಿ ಅಧ್ಯಕ್ಷರಿಗೆ ಸೂಚಿಸಿದರು. ಆದೇಶದ ಹಿನ್ನೆಲೆಯಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಕಲಾಪದಲ್ಲಿ ಭಾಗಿಯಾದ ಡಿಎಸ್‌ಎಸ್‌ಎಸ್‌ಬಿ ಅಧ್ಯಕ್ಷ, ಸೀಲ್ ಮಾಡಲಾದ ಎರಡು ಕವರ್‌ಗಳಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದವರ ವಿವರವನ್ನು ಒದಗಿಸಿದರು. ಜಾತಿ ಆಧಾರಿತ ಪ್ರಶ್ನೆಯನ್ನು ಸೇರಿಸಿದ ವ್ಯಕ್ತಿಯನ್ನು ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಸಮಿತಿಯಿಂದ ವಜಾಗೊಳಿಸಿರುವುದಾಗಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು. ಜಾತಿ ಆಧಾರಿತ ಪ್ರಶ್ನೆ ಕೇಳಿದ ಹಿನ್ನೆಲೆಯಲ್ಲಿ ಡಿಎಸ್‌ಎಸ್‌ಎಸ್‌ಬಿ ಅಧ್ಯಕ್ಷರು ಹಾಗೂ ಇತರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ವಕೀಲ ಸತ್ಯಪ್ರಕಾಶ್ ಗೌತಮ್ ಎಂಬವರು ಅರ್ಜಿ ಸಲ್ಲಿಸಿದ್ದರು.







