ಭಟ್ಕಳ : ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಪ್ರಪಂಚದ ಅತಿ ದುಬಾರಿ ಚಿಕಿತ್ಸೆ

ಬೆಂಗಳೂರು : ಪ್ರಪಂಚದ ಅತಿ ದುಬಾರಿ ಚಿಕಿತ್ಸೆಯನ್ನು ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಕರ್ನಾಟಕದಲ್ಲಿ ಮೊದಲ ಬಾರಿಗೆ ನೀಡಲಾಗಿದೆ.
ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪಟ್ಟಣದ ಮೊಹಮ್ಮದ್ ಬೆಸಿಲ್ ಮತ್ತು ಖಾದಿಜಾ ಅವರ ಪುತ್ರಿ ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದ ಬಳಲುತ್ತಿದ್ದ 14 ತಿಂಗಳ ಫಾತಿಮಾ ಎಂಬಾಕೆಗೆ ಬೆಂಗಳೂರು ಆಸ್ಪತ್ರೆಯಲ್ಲಿ 16 ಕೋಟಿ ರೂ.ಗಳ ಈ ಚಿಕಿತ್ಸೆ ನೀಡಲಾಗಿದ್ದು ಮಗುವೀಗ ಚೇತರಿಕೆ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.
ಫಾತಿಮಾ, ಕಳೆದ ತಿಂಗಳ ಕೊನೆಯಲ್ಲಿ ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ "ಝೋಲ್ಗೆನ್ಸ್ಮಾ' - ಜೀನ್ ಥೆರಪಿಗೆ ಒಳಗಾಗಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಬೆನ್ನುಮೂಳೆ ಸ್ನಾಯು ಕ್ಷೀಣತೆಯ ಈ ಕಾಯಿಲೆಗೆ ಔಷಧಿಯನ್ನು ಪ್ರಮುಖ ಔಷಧ ಕಂಪನಿಯಾಗಿರುವ ಸ್ವೀಡನ್ ನ ನೊವಾರ್ಟಿಸ್ ತಯಾರಿಸುತ್ತದೆ. ಆದರೆ ಇದಕ್ಕೆ ಸುಮಾರು 2.1 ಮಿಲಿಯನ್ ಯುಎಸ್ ಡಾಲರ್, ಅಂದರೆ ಸುಮಾರು 16 ಕೋಟಿ ರೂ. ಬೆಲೆಯಿದೆ. ಇಷ್ಟೊಂದು ದುಬಾರಿ ಬೆಲೆಯ ಈ ಔಷಧಿ ಪಡೆಯಲಾಗದೇ ಅದೇಷ್ಟೊ ಮಂದಿ ಸಾವನ್ನಪ್ಪಿದ್ದಾರೆ. ಆದರೆ ಮಾನವೀಯ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪೆನಿ, ಪ್ರತಿವರ್ಷ ಜಗತ್ತಿನಲ್ಲಿ ಈ ಕಾಯಿಲೆಗೆ ತುತ್ತಾದವರ ಹೆಸರುಗಳನ್ನು ಪಡೆದು ವರ್ಷಕ್ಕೊಮ್ಮೆ ಲಾಟರಿ ಆರಿಸಿ, ಲಾಟರಿಯಲ್ಲಿ ವಿಜೇತರಾದವರಿಗೆ ಈ 16 ಕೋಟಿಯ ಔಷಧವನ್ನು ಉಚಿತವಾಗಿ ಪೂರೈಸುತ್ತದೆ. ಈ ರೀತಿಯ ಮಿಲಿಯನೇರ್ ಅದೃಷ್ಟಶಾಲಿಗಳ ಪೈಕಿ ಫಾತಿಮಾ ಈ ಬಾರಿ ವಿಜೇತೆಯಾಗಿದ್ದಾಳೆ.
ಅಂಬೆಗಾಲಿಡುವವರಿಗೆ ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ ಅಥವಾ ಎಸ್‌ಎಂಎ ಎಂದು ಗುರುತಿಸಲಾಗುವ ಈ ಕಾಯಿಲೆಯು ಮೆದುಳಿನಿಂದ ಸ್ನಾಯುಗಳಿಗೆ ವಿದ್ಯುತ್ ಸಂಕೇತಗಳನ್ನು ಒಯ್ಯುವ ನರಕೋಶಗಳ ನಷ್ಟದಿಂದ ಉಂಟಾಗುತ್ತದೆ. ಈ ಸಿಗ್ನಲಿಂಗ್‌ಗೆ ಅಗತ್ಯವಾದ ಪ್ರೋಟೀನ್ ತಾಯಿ ಮತ್ತು ತಂದೆಯ ಜೀನ್‌ನಿಂದ ಮಾತ್ರ ಸಂಕೇತಿಸುತ್ತದೆ. ಆದರೆ ಈ ಎರಡೂ ಪ್ರತಿಗಳು ದೋಷಪೂರಿತವಾಗಿದ್ದರೆ ಮತ್ತು ಚಿಕಿತ್ಸೆಯಿಲ್ಲದೆ ಇದ್ದರೆ ಮಗು ಈ ಅಸ್ವಸ್ಥತೆಗೆ ಒಳಗಾಗುತ್ತದೆ. ಈ ಕಾಯಿಲೆ ಅಂತಿಮವಾಗಿ ಮಾರಕವಾಗಿದೆ. ಹಣವಿದ್ದವರು ಮಾತ್ರ ಈ ಚಿಕಿತ್ಸೆ ನಿಭಾಯಿಸಬಲ್ಲರು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.







