ಮಾ.8ರಂದು 'ರಾಜ್ಯ ಬಜೆಟ್' ಮಂಡನೆ: ಮಾ.4ರಿಂದ 31ರವರೆಗೆ ಬಜೆಟ್ ಅಧಿವೇಶನ

ಬೆಂಗಳೂರು, ಫೆ.18: ರಾಜ್ಯ ಬಿಜೆಟ್ ಅನ್ನು ಮಾ.8ರಂದು ಮಂಡನೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಮಾ.4 ರಿಂದ 31ರವರೆಗೆ ಬಜೆಟ್ ಅಧಿವೇಶನ ನಡೆಯಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಮಾ.8ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಮಾ.4 ಹಾಗೂ 5 ರಂದು ಒಂದು ದೇಶ, ಒಂದು ಚುನಾವಣೆ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ ಎಂದರು.
ಕರ್ನಾಟಕ ಠೇವಣಿ ಮತ್ತು ಹೂಡಿಕೆ ತಿದ್ದುಪಡಿ ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸಲು ಒಪ್ಪಿಗೆ ನೀಡಲಾಗಿದೆ. ಈ ಮಸೂದೆಯಲ್ಲಿ ಒತ್ತಾಯಪೂರ್ವಕವಾಗಿ ಸಾಲದ ಹಣ, ಬಡ್ಡಿ ವಸೂಲಿ ಮಾಡುವುದನ್ನು ನಿರ್ಬಂಧಿಸಲಾಗಿದೆ. ಶಿಕ್ಷೆಯನ್ನು 6 ತಿಂಗಳಿನಿಂದ 1 ವರ್ಷಕ್ಕೆ ಏರಿಕೆ, ದಂಡದ ಪ್ರಮಾಣವನ್ನು 5 ಸಾವಿರ ರೂ.ಗಳಿಂದ 50 ಸಾವಿರ ರೂ.ಗೆ ಹೆಚ್ಚಳ ಮಾಡಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಕೋವಿಡ್ ಚಿಕಿತ್ಸೆ ಹಾಗೂ ನಿರ್ವಹಣೆಗಾಗಿ ಖಾಸಗಿ ಆಸ್ಪತ್ರೆಗಳು ಹಾಗೂ ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಪ್ರಸಕ್ತ ಸಾಲಿನ ಜ.11ರವರೆಗೆ 620 ಕೋಟಿ ರೂ.ಗಳನ್ನು ಖರ್ಚು ಮಾಡಿರುವುದಾಗಿ ಪ್ರಸ್ತಾಪಿಸಿದ್ದು, ಮಾ.31ರವರೆಗೆ ಹೆಚ್ಚುವರಿಯಾಗಿ ಖರ್ಚು ಮಾಡಲು 80 ಕೋಟಿ ರೂ.ಗಳನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ 700 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ಅವರು ಹೇಳಿದರು.
ವಸಂತನಗರಲ್ಲಿ ಸರಕಾರಿ ಕ್ವಾಟ್ರಸ್ ಜಾಗದಲ್ಲಿ 117 ಕೋಟಿ ರೂ.ವೆಚ್ಚದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಶಿವಮೊಗ್ಗ ಜಿಲ್ಲೆಯ ಮಾಚೇನಹಳ್ಳಿ ಗ್ರಾಮದ ಬಸವನೆಲೆ ಟ್ರಸ್ಟ್ ಗೆ 3-04 ಎಕರೆ ಜಮೀನು ಮಂಜೂರು ಮಾಡಲು, ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆ-3 ಅಡಿಯಲ್ಲಿ 2204.39.ಕಿ.ಮೀ ಹಾಗೂ 2649 ಮೀಟರ್ 75 ಕಿರು ಸೇತುವೆ ನಿರ್ಮಾಣಕ್ಕೆ 1848.95 ಕೋಟಿ ರೂ. ಬಿಡುಗಡೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಕೆ.ಆರ್.ಮಾರುಕಟ್ಟೆನಿಂದ ಬೆಳ್ಳಂದೂರು ಕೆರೆವರೆಗೆ ಕೋರಮಂಗಲ ವ್ಯಾಲಿ ಪುನರುಜ್ಜೀವನ ಕೈಗೊಳ್ಳಲಾದ 169 ಕೋಟಿ ರೂ.ಯೋಜನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಅರ್ಜುನವಾಡ, ಮಸರಗುಪ್ಪಿ, ಜಬಪುರ, ನೆರ್ಲಿ ಗ್ರಾಮಗಳ 1200 ಹೆಕ್ಟೇರ್‍ಗಳಿಗೆ 0.11 ಟಿಎಂಸಿ ನೀರನ್ನು ಏತ ನೀರಾವರಿ ಯೋಜನೆಗೆ 67.40 ಕೋಟಿ ರೂ. ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ಕೃಷ್ಣಾ ಕೊಳ್ಳ ಅಭಿವೃದ್ದಿ ಪ್ರಾಧಿಕಾರ ರಚನೆ ವಿಧೇಯಕ 2020ಕ್ಕೆ ರದ್ದು ಮಾಡಲು ಸಂಪುಟ ಅನುಮೋದನೆ ನೀಡಿದೆ. ಚಾಮರಾಜನಗರದಲ್ಲಿ ಹೊಸದಾಗಿ ಕೃಷಿ ಕಾಲೇಜು ಆರಂಭಿಸಲು ಹೊರಡಿಸಲಾಗಿದ್ದ ಆದೇಶಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ. ಕೃಷಿ ಕಾಲೇಜು ಆರಂಭಕ್ಕೆ 35.92 ಕೋಟಿ ರೂ.ಗಳ ಅನುದಾನ ಒದಗಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಕೈಗಾರಿಕಾ ಅಭಿವೃದ್ಧಿ ಉದ್ದೇಶದಿಂದ ಕೆಐಎಡಿಬಿ ವತಿಯಿಂದ ಸ್ವಾಧೀನಪಡಿಸಿಕೊಳ್ಳುವ ಪ್ರತಿ ಎಕರೆ ಭೂಮಿಗೆ ಪರಿಹಾರ ರೂಪವಾಗಿ ಈ ಹಿಂದೆ ನೀಡುತ್ತಿದ್ದ ಶೇ.40ರಷ್ಟು ಭೂಮಿಯ ಪ್ರಮಾಣವನ್ನು ಶೇ.45ಕ್ಕೆ ಹೆಚ್ಚಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಮೀಸಲಾತಿ: ಕುರುಬ ಸಮುದಾಯದ ಎಸ್ಟಿ ಮೀಸಲಾತಿ ಹೋರಾಟದ ವಿಚಾರದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ಐದಾರು ಜಿಲ್ಲೆಗಳಲ್ಲಿ ಕುರುಬರ ಕುಲಶಾಸ್ತ್ರೀಯ ಅಧ್ಯಯನ ನಡೆಯುತ್ತಿದ್ದು, ಅಧ್ಯಯನದ ವರದಿ ಬಂದ ಬಳಿಕ ಕ್ರಮ ಕೈಗೊಳ್ಳುವುದಾಗಿ ಈಗಾಗಲೆ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ವಿಧಾನಪರಿಷತ್ತಿನಲ್ಲಿ ಉತ್ತರಿಸಿದ್ದಾರೆ ಎಂದರು.
ವಿವಿಧ ಸಮುದಾಯಗಳಿಂದ ಮೀಸಲಾತಿಗಾಗಿ ಬಂದಿರುವ ಪ್ರಸ್ತಾವನೆ, ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿದರು. ಹಲವು ಸಲಹೆಗಳನ್ನು ಮಂತ್ರಿಗಳು ಕೊಟ್ಟಿದ್ದಾರೆ. ಎಲ್ಲ ಸಚಿವರ ಸಲಹೆಗಳನ್ನು ಮುಖ್ಯಮಂತ್ರಿ ಆಲಿಸಿದ್ದು, ಕಾನೂನು ತಜ್ಞರು, ವಿವಿಧ ಆಯೋಗಗಳ ವರದಿಯನ್ನು ಪರಿಶೀಲಿಸಿ ಚರ್ಚೆ ಮಾಡಿ, ಸಂವಿಧಾನದ ಚೌಕಟ್ಟಿನೊಳಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇನ್ನಷ್ಟು ಮಾಹಿತಿ ಪಡೆದು ಮತ್ತೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡಲು ನಿರ್ಧರಿಸಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಔಪಚಾರಿಕ ಚರ್ಚೆ: ರಾಜ್ಯದಲ್ಲಿ ವಿವಿಧ ಸಮುದಾಯಗಳು ಮೀಸಲಾತಿಗೆ ನಡೆಸುತ್ತಿರುವ ಹೋರಾಟಗಳ ಬಗ್ಗೆ ಸಚಿವ ಸಂಪುಟ ಸಭೆ ಮುಗಿದ ಬಳಿಕ ಸಚಿವರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ, ಔಪಚಾರಿಕವಾಗಿ ಚರ್ಚೆ ನಡೆಸಿ, ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಬಗೆಯ ಆತುರದ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ ಎಂದು ಸಚಿವರಿಗೆ ತಿಳಿಸಿದ್ದಾರೆ.
ಆಯಾ ಸಮುದಾಯಗಳ ಸ್ವಾಮೀಜಿಗಳ ಜೊತೆ ಸಮಾಲೋಚನೆ ಮಾಡಿ, ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಿ ಎಂದು ಹಿರಿಯ ಸಚಿವರಿಗೆ ಸೂಚಿಸಿದ ಮುಖ್ಯಮಂತ್ರಿ, ಸಂವಿಧಾನ ಹಾಗೂ ಕಾನೂನು ಚೌಕಟ್ಟಿನಲ್ಲಿಯೆ ಮೀಸಲಾತಿ ಕೊಡಬೇಕು. ಈ ಪ್ರಕ್ರಿಯೆಗೆ ಬಹಳಷ್ಟು ಸಮಯ ಬೇಕಾಗುತ್ತದೆ. ಆತುರದಿಂದ ಯಾವುದೇ ನಿರ್ಣಯ ಕೈಗೊಳ್ಳಲು ಆಗುವುದಿಲ್ಲ ಎಂಬ ಸಂಗತಿಯನ್ನು ಸ್ವಾಮೀಜಿಗಳಿಗೆ ಮನವರಿಕೆ ಮಾಡಿಕೊಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಯಾವುದೆ ಕಾರಣಕ್ಕೂ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟಗಳು ಕೈ ಮೀರದಂತೆ ಎಚ್ಚರವಹಿಸಿ. ಮೀಸಲಾತಿ ವಿಚಾರದಲ್ಲಿ ಯಾವ ಸಚಿವರು ಬಹಿರಂಗವಾಗಿ ಹೇಳಿಕೆಗಳನ್ನು ನೀಡಬೇಡಿ ಎಂದು ಯಡಿಯೂರಪ್ಪ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಸಚಿವರಾದ ಮುರುಗೇಶ್ ನಿರಾಣಿ, ಡಾ.ಕೆ.ಸುಧಾಕರ್ ಉಪಸ್ಥಿತರಿದ್ದರು.







