ರೈತರು ಹಿಂದಿರುಗಲಾರರು, ಬಲವಂತಪಡಿಸಿದರೆ ಬೆಳೆ ಸುಟ್ಟು ಹಾಕಲಿದ್ದಾರೆ: ರಾಕೇಶ್ ಟಿಕಾಯತ್

ಹೊಸದಿಲ್ಲಿ, ಫೆ. 18: ಬೇಡಿಕೆ ಈಡೇರುವ ವರೆಗೆ ಪ್ರತಿಭಟನೆ ನಡೆಸುತ್ತಿರುವ ರೈತರು ಕೊಯ್ಲಿಗೆ ಹಿಂದಿರುಗಲಾರರು ಎಂದು ಪುನರುಚ್ಚರಿಸಿರುವ ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು)ದ ನಾಯಕ ರಾಕೇಶ್ ಟಿಕಾಯತ್, ನಮ್ಮನ್ನು ಹಿಂದಿರುಗಲು ಬಲವಂತಪಡಿಸಿದರೆ ಬೆಳೆಯನ್ನು ಸುಟ್ಟು ಹಾಕಲಿದ್ದೇವೆ ಎಂದಿದ್ದಾರೆ.
ಹರ್ಯಾಣದ ಖಾರಕ್ ಪುನಿಯಾದಲ್ಲಿ ಪ್ರತಿಭಟನಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಎಲ್ಲ ಮೂರು ಕೃಷಿ ಕಾಯ್ದೆಗಳನ್ನು ಸಂಪೂರ್ಣವಾಗಿ ಹಿಂದೆ ತೆಗೆಯಬೇಕೆನ್ನುವ ತಮ್ಮ ಆಗ್ರಹಕ್ಕೆ ರೈತರು ಬದ್ದರಾಗಿದ್ದಾರೆ ಎಂದರು. ರೈತರು ಕೊಯ್ಲಿಗೆ ಹಿಂದಿರುಗಲಿದ್ದಾರೆ ಹಾಗೂ ಪ್ರತಿಭಟನೆ ಎರಡು ತಿಂಗಳಲ್ಲಿ ಮುಗಿಯುತ್ತದೆ ಎಂಬ ಭ್ರಮೆ ಕೇಂದ್ರಕ್ಕೆ ಬೇಡ. ಬಲವಂತಪಡಿಸಿದರೆ ನಾವು ಬೆಳೆಯನ್ನು ಸುಟ್ಟು ಹಾಕಲಿದ್ದೇವೆ. ನಾವು ಕಟಾವು ಮಾಡುತ್ತೇವೆ ಹಾಗೂ ಪ್ರತಿಭಟನೆ ನಡೆಸುತ್ತೇವೆ ಎಂದ ಟಿಕಾಯತ್ ಹೇಳಿದ್ದಾರೆ.
ತೈಲ ಬೆಲೆ ಏರಿಕೆಯಾದ ಹೊರತಾಗಿಯೂ ಬೆಳೆಯ ಬೆಲೆ ಹೆಚ್ಚಾಗಿಲ್ಲ. ಕೇಂದ್ರ ಸರಕಾರ ಪರಿಸ್ಥಿತಿಯನ್ನು ಹಾಳು ಮಾಡಿದರೆ, ನಾವು ಪಶ್ಚಿಮ ಬಂಗಾಳ ಕೂಡ ಟ್ರ್ಯಾಕ್ಟರ್ ಅನ್ನು ಕೊಂಡೊಯ್ಯಲಿದ್ದೇವೆ. ರೈತರಿಗೆ ಅಲ್ಲಿ ಕೂಡ ಕನಿಷ್ಠ ಬೆಂಬಲ ಬೆಲೆ ದೊರೆಯುತ್ತಿಲ್ಲ ಎಂದು ಅವರು ಹೇಳಿದರು. ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧದ ‘ರೈಲ್ ರೋಕೋ’ ದ ಭಾಗವಾಗಿ ಸಾವಿರಾರು ರೈತ ಪ್ರತಿಭಟನಕಾರರು ಪಂಜಾಬ್, ಹರ್ಯಾಣ ಹಾಗೂ ಉತ್ತರಪ್ರದೇಶದ ವಿವಿಧ ಭಾಗಗಳಲ್ಲಿ ಗುರುವಾರ ರೈಲು ಹಳಿಗಳಲ್ಲಿ ಕುಳಿತು ರೈಲು ಸಂಚಾರ ತಡೆದರು.







