ಕೋವಿಡ್ ನಡುವೆಯೂ ಅಲ್ಪಸಂಖ್ಯಾತರಿಗೆ ಕೇಂದ್ರದಿಂದ ಹೆಚ್ಚು ಅನುದಾನ: ಶ್ರೀಮಂತ ಪಾಟೀಲ್ ಮೆಚ್ಚುಗೆ

ಬೆಂಗಳೂರು, ಫೆ.18: ಕೇಂದ್ರ ಸರಕಾರವು ಕೋವಿಡ್ ಸಂಕಷ್ಟದ ನಡುವೆ ಅಲ್ಪಸಂಖ್ಯಾತರಿಗೆ ಹೆಚ್ಚು ಅನುದಾನ ನೀಡಿರುವುದು ಸ್ವಾಗತಾರ್ಹ ಎಂದು ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಪಾಟೀಲ್ ತಿಳಿಸಿದರು.
ಗುರುವಾರ ನಗರದ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ನೇತೃತ್ವದಲ್ಲಿ 2021ರ ಬಜೆಟ್‍ನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ 4,810 ಕೋಟಿ ರೂಪಾಯಿ ನೀಡಿದೆ. ಇದರಡಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದೆ ಎಂದರು. ಕಳೆದ ಸಾಲಿನಲ್ಲಿ ಈ ಇಲಾಖೆಗೆ 4,500 ಕೋಟಿ ರೂಪಾಯಿ ನೀಡಲಾಗಿತ್ತು ಎಂದು ತಿಳಿಸಿದರು.
ಪ್ರಿ ಮೆಟ್ರಿಕ್, ಪೋಸ್ಟ್ ಮೆಟ್ರಿಕ್ ಸ್ಕಾಲರ್‍ಶಿಪ್, ಕೌಶಲ್ಯ ಅಭಿವೃದ್ಧಿಯಡಿ ಟಿ.ವಿ. ರಿಪೇರಿ, ಮೊಬೈಲ್ ರಿಪೇರಿ, ಪ್ಲಂಬರ್ ತರಬೇತಿ ನೀಡಲಾಗುತ್ತಿದೆ. ಪಾರ್ಸಿ ಜನಾಂಗದ ಜನಸಂಖ್ಯೆ ಕುಸಿಯುತ್ತಿದ್ದು, ಅದನ್ನು ತಡೆಗಟ್ಟುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಯತ್ನ ನಡೆಯಲಿದೆ ಎಂದು ಅವರು ಹೇಳಿದರು.
ಶಿಕ್ಷಣ ಇಲಾಖೆಯ ಸಬಲೀಕರಣಕ್ಕಾಗಿ 2,381 ಕೋಟಿ ರೂ.ಗಳನ್ನು ಕೇಂದ್ರ ಅಲ್ಪಸಂಖ್ಯಾತರ ಇಲಾಖೆಯು ಮೀಸಲಿಟ್ಟಿದೆ. ಇದರಡಿ ಮೆಟ್ರಿಕ್ ಪೂರ್ವ ಸ್ಕಾಲರ್‍ಶಿಪ್‍ಗೆ 1,378 ಕೋಟಿ ರೂ., ಮೆಟ್ರಿಕ್ ನಂತರದ ಸ್ಕಾಲರ್‍ಶಿಪ್‍ಗಾಗಿ 468 ಕೋಟಿ ರೂ, ವೃತ್ತಿಪರ ಮತ್ತು ತಾಂತ್ರಿಕ ಕೋರ್ಸ್‍ಗಳಿಗೆ ಮೆರಿಟ್ ಸ್ಕಾಲರ್‍ಶಿಪ್‍ಗೆ 325 ಕೋಟಿ ರೂ., ಮೌಲಾನಾ ಆಝಾದ್ ರಾಷ್ಟ್ರೀಯ ಫೆಲೋಶಿಪ್‍ಗೆ 99 ಕೋಟಿ ರೂ., ಉಚಿತ ತರಬೇತಿ ಹಾಗೂ ಪೂರಕ ಯೋಜನೆಗಳಿಗೆ 79 ಕೋಟಿ ರೂ., ಸಾಗರೋತ್ತರ ಕಲಿಕೆಗೆ ಸಾಲ 24 ಕೋಟಿ ರೂ., ಯುಪಿಎಸ್ಸಿ, ಕೆಪಿಎಸ್ಸಿ, ಎಸ್‍ಎಸ್‍ಸಿ ಪ್ರಿಲಿಮ್ ಸಂಬಂಧ ಯೋಜನೆ 8 ಕೋಟಿ ರೂ. ನೀಡಲಾಗುವುದು ಎಂದು ಅವರು ಹೇಳಿದರು.
ಕೌಶಲ್ಯ ಅಭಿವೃದ್ಧಿ ಮತ್ತು ಜೀವನೋಪಾಯ ಯೋಜನೆಗಳಿಗೆ ಒಟ್ಟು 573 ಕೋಟಿ ರೂ. ಮೀಸಲಿಡಲಾಗಿದೆ. ಅಲ್ಪಸಂಖ್ಯಾತರ ಕೌಶಲ್ಯಾಭಿವೃದ್ಧಿ ಯೋಜನೆಗಳು-276 ಕೋಟಿ ರೂ., ನಯೀ ಮಂಝಿಲ್ ಯೋಜನೆಗೆ 87 ಕೋಟಿ ರೂ., ಕಲೆ ಮತ್ತು ಕರಕುಶಲ ಕಲೆ ಕೌಶಲ್ಯಾಭಿವೃದ್ಧಿ ಹಾಗೂ ತರಬೇತಿಗೆ 47 ಕೋಟಿ ರೂ., ಅಲ್ಪಸಂಖ್ಯಾತ ಮಹಿಳಾ ನಾಯಕತ್ವ ಅಭಿವೃದ್ಧಿ ಯೋಜನೆಗೆ 8 ಕೋಟಿ ರೂ., ನ್ಯಾಷನಲ್ ಮೈನಾರಿಟೀಸ್ ಡೆವಲಪ್‍ಮೆಂಟ್ ಆಂಡ್ ಫೈನಾನ್ಸ್ ಕಾರ್ಪೋರೇಷನ್ ಯೋಜನೆಗಳಿಗೆ ಎರಡು ಕೋಟಿ ರೂ., ಎನ್‍ಎಂಡಿಎಫ್‍ಸಿ ಈಕ್ವಿಟಿಗೆ ಕೊಡುಗೆ 153 ಕೋಟಿ ರೂ.ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.
ವಿಶೇಷ ಯೋಜನೆಗಳಿಗೆ ಒಟ್ಟು ಅನುದಾನ 46 ಕೋಟಿ ರೂ.ಇದ್ದು, ಸಂಶೋಧನೆ/ಕಲಿಕೆ, ಪ್ರಚಾರ ಮತ್ತು ಇತರ ಅಭಿವೃದ್ಧಿ ಯೋಜನೆಗಳು 41 ಕೋಟಿ ರೂ., ಸಂಸ್ಕೃತಿ ಮತ್ತು ಪರಂಪರೆ ಕಾಪಾಡುವಿಕೆಗೆ 2 ಕೋಟಿ ರೂ., ಸಣ್ಣ ಅಲ್ಪಸಂಖ್ಯಾತ ಸಮುದಾಯಗಳ ಜನಸಂಖ್ಯಾ ಕುಸಿತ ತಡೆಗೆ 3 ಕೋಟಿ ರೂಪಾಯಿ ಮೀಸಲಿಡಲಾಗುವುದು ಎಂದು ಶ್ರೀಮಂತ್ ಪಾಟೀಲ್ ಹೇಳಿದರು.
ರಾಜ್ಯ ಸರಕಾರವು 2020-21ರ ಬಜೆಟ್‍ನಲ್ಲಿ 1,050 ಕೋಟಿ ರೂಪಾಯಿಗಳನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಮೀಸಲಿಟ್ಟಿತ್ತು. ಪರಿಷ್ಕೃತಗೊಂಡು 850 ಕೋಟಿ ರೂ.ನೀಡಲಾಗಿದೆ. ಈ ಬಾರಿ ಇನ್ನಷ್ಟು ಹೆಚ್ಚು ಹಣ ಮೀಸಲಿಡುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಮುಝಮ್ಮಿಲ್ ಅಹ್ಮದ್ ಬಾಬು, ಕೆಎಂಡಿಸಿ ಅಧ್ಯಕಷ ಮುಖ್ತಾರ್ ಹುಸೇನ್ ಪಠಾಣ್ ರಾಜ್ಯ ಮಾಧ್ಯಮ ವಿಭಾಗದ ಸಂಚಾಲಕ ಕರುಣಾಕರ ಖಾಸಲೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







