Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಮುಂಬೈ ಕನ್ನಡದ ಮೇರು ವ್ಯಕ್ತಿತ್ವ...

ಮುಂಬೈ ಕನ್ನಡದ ಮೇರು ವ್ಯಕ್ತಿತ್ವ ಎಚ್.ಬಿ.ಎಲ್. ರಾವ್

ದಯಾನಂದ ಸಾಲ್ಯಾನ್ದಯಾನಂದ ಸಾಲ್ಯಾನ್19 Feb 2021 12:05 AM IST
share
ಮುಂಬೈ ಕನ್ನಡದ ಮೇರು ವ್ಯಕ್ತಿತ್ವ ಎಚ್.ಬಿ.ಎಲ್. ರಾವ್



ದಯಾನಂದ ಸಾಲ್ಯಾನ್

ಮುಂಬೈ ಮಹಾನಗರದ ಕನ್ನಡ - ತುಳು ಸಾಹಿತ್ಯಕ, ಸಾಂಘಿಕ, ಸಾಂಸ್ಕೃತಿಕ ಜಗತ್ತಿನಲ್ಲಿ ಹೆಮ್ಮರವಾಗಿ ಬೆಳೆದು ನಿಂತಿರುವ ಮೇರು ವ್ಯಕ್ತಿತ್ವ ಎಚ್.ಬಿ.ಎಲ್. ರಾವ್ ಅವರದ್ದು. ಯಕ್ಷಗಾನ ದಾರಿ ತಪ್ಪುತ್ತಿದ್ದಾಗ, ಯಕ್ಷಗಾನಕ್ಕೆ ಸಲ್ಲಬೇಕಾದ ನ್ಯಾಯೋಚಿತ ಸ್ಥಾನ ಸಿಗದಿದ್ದಾಗ ಹುಟ್ಟು ಹಾಕಿದ ‘ಪದವೀಧರ ಯಕ್ಷಗಾನ ಸಮಿತಿ’; ಹೊಸ ಪ್ರತಿಭೆಗಳನ್ನು ಬೆಳಕಿಗೆ ತರಲೆಂದು ಗೆಳೆಯರು ಸೇರಿ ಕಟ್ಟಿಕೊಂಡ ‘ಸಾಹಿತ್ಯ ಬಳಗ’, ನವಪೀಳಿಗೆಗೆ ಭಾರತದ ಬಗ್ಗೆ ಅರಿವು ಮೂಡಿಸಲು ‘ಪ್ರವಚನ ಸಮಿತಿ’; ಅಸ್ಮಿತೆಯನ್ನು ಎತ್ತಿ ತೋರಿಸಲು ‘ಶಿವಳ್ಳಿ ಪ್ರತಿಷ್ಠಾನ’-ಹೀಗೆ ಹತ್ತು ಹಲವು ಸಂಘ-ಸಂಸ್ಥೆಗಳನ್ನು ಕಟ್ಟಿಕೊಂಡು ಎಂಭತ್ತೆಂಟರ ಹರೆಯದಲ್ಲೂ ಕ್ರಿಯಾಶೀಲರಾಗಿದ್ದ ಎಚ್.ಬಿ.ಎಲ್. ರಾವ್ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಮರಾಠಿ ಮಣ್ಣಿನಲ್ಲಿ ಕನ್ನಡ ಸಾಹಿತ್ಯದ ಪರಿಚಾರಿಕೆಯನ್ನು ಮಾಡಿದವರು.

ಸದಾ ಜೀವಂತವಿರುವ, ಲವಲವಿಕೆಯಿಂದ ಕೂಡಿದ ನಗರ ‘ಮುಂಬೈ’ ಕೊರೋನದಿಂದ ನರಳುತ್ತಿದ್ದಂತಹ ಸಂದಿಗ್ಧ ಸ್ಥಿತಿಯಲ್ಲಿದ್ದಾಗ ಇಲ್ಲಿ ಬದುಕು ಕಟ್ಟಿ, ಮುಂಬೈ ಕನ್ನಡಿಗರಿಗೆ ದಾರಿದೀಪವಾಗಿ, ಸ್ಫೂರ್ತಿಯಾಗಿ, ಹೆಮ್ಮೆಯ ಕನ್ನಡಿಗನಾಗಿ ಜನ ಮಾನಸದಲ್ಲಿ ಸದಾ ನೆಲೆಸುವಂತಹ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿರುವ ಹಿರಿ ಜೀವಿಗಳು, ಆಶಾ ಜ್ಯೋತಿಯನ್ನು ಮೂಡಿಸಿದ್ದ ಯುವ ಚೇತನಗಳು ಯಾರಿಗೂ ಹೇಳದೆಯೇ ಕಣ್ಮರೆಯಾದವು. ಕೆಲವೊಂದು ಚೇತನಗಳ ಅಂತಿಮ ನಮನಕ್ಕೆ ಸಾವಿರಾರು ಜನ ಸೇರಬೇಕಾದಲ್ಲಿ ಕೇವಲ ಬೆರಳಣಿಕೆಯಷ್ಟು ಜನ ಆ ಚೇತನಗಳ ಅಂತಿಮ ಕ್ಷಣಕ್ಕೆ ಸಾಕ್ಷಿಯಾದುದು ವಿಪರ್ಯಾಸ. ಕೊರೋನ ಎನ್ನುವ ಮಾರಿ ಇಲ್ಲಿನ ಜನರ ಎದೆಯ ಮೇಲೆ ‘ಬರೆ’ಯನ್ನು ಎಳೆದುದರ ಪರಿಣಾಮವಾಗಿ ಕಂಗೆಟ್ಟ ಅವರಿನ್ನೂ ಚೇತರಿಸಿಲ್ಲ. ಮುಂಬೈ ನಗರಿ ಅದೆಷ್ಟೋ ಏಟು, ಒದೆತಗಳನ್ನು ತಿಂದು ಮತ್ತೆ ಮರುದಿನ ನಿದ್ದೆಯಿಂದ ಎಚ್ಚೆತ್ತ ಮಗುವಿನಂತೆ ಉಲ್ಲಸಿತವಾಗುತ್ತಿತ್ತು. ಆದರೆ ಈ ಪೆಟ್ಟಿನಿಂದ, ಆಘಾತದಿಂದ ಸದ್ಯಕ್ಕಂತೂ ಚೇತರಿಸಿ ನಿಲ್ಲುವ ಸ್ಥಿತಿಯಲ್ಲಿ ಇಲ್ಲ. ಅಂತಹ ಅಗಲಿದ ಚೇತನಗಳಲ್ಲಿ ಹಿರಿಜೀವ ಹೆಜಮಾಡಿ ಬಾಗಿಲ್ತಾಯ ಲಕ್ಷ್ಮೀನಾರಾಯಣ ರಾವ್ ಓರ್ವರು. ಎಂಭತ್ತೆಂಟರಲ್ಲೂ ಐವತ್ತರ ಲವಲವಿಕೆ! ಒಂದು ಕಾರ್ಯಕ್ರಮ ಮುಗಿದೊಡನೆ ಇನ್ನೊಂದಕ್ಕೆ ಅಣಿಯಾಗುವ; ಚುರುಕು ಕಣ್ಣುಗಳ ಅಬ್ಬರವಿಲ್ಲದ ದೇಹಾಕೃತಿಗೆ ಹೆಗಲಲ್ಲೊಂದು ಮಾತನಾಡುವ ಜೋಳಿಗೆ. ವಾಮನ ರೂಪದ ಮೊಗದಲ್ಲಿ ಸದಾ ಕೃಷ್ಣನಂತೆ ನಗು. ಹೌದು! ಅವರೇ ತಮಗೆ ತಾವೇ ‘ಬಡ ಬ್ರಾಹ್ಮಣ’ ಎಂದು ಹೇಳಿಕೊಳ್ಳುತ್ತಾ ಸದಾ ಮುಂಬೈ ಹಾಗೂ ಉಪನಗರದುದ್ದಕ್ಕೂ ಚಲಿಸುವ ಎಚ್.ಬಿ.ಎಲ್.ರಾವ್.

 ಮುಂಬೈ ಮಹಾನಗರದ ಕನ್ನಡ - ತುಳು ಸಾಹಿತ್ಯಕ, ಸಾಂಘಿಕ, ಸಾಂಸ್ಕೃತಿಕ ಜಗತ್ತಿನಲ್ಲಿ ಹೆಮ್ಮರವಾಗಿ ಬೆಳೆದು ನಿಂತಿರುವ ಮೇರು ವ್ಯಕ್ತಿತ್ವ ಎಚ್.ಬಿ.ಎಲ್. ರಾವ್ ಅವರದ್ದು. ಯಕ್ಷಗಾನ ದಾರಿ ತಪ್ಪುತ್ತಿದ್ದಾಗ, ಯಕ್ಷಗಾನಕ್ಕೆ ಸಲ್ಲಬೇಕಾದ ನ್ಯಾಯೋಚಿತ ಸ್ಥಾನ ಸಿಗದಿದ್ದಾಗ ಹುಟ್ಟು ಹಾಕಿದ ‘ಪದವೀಧರ ಯಕ್ಷಗಾನ ಸಮಿತಿ’; ಹೊಸ ಪ್ರತಿಭೆಗಳನ್ನು ಬೆಳಕಿಗೆ ತರಲೆಂದು ಗೆಳೆಯರು ಸೇರಿ ಕಟ್ಟಿಕೊಂಡ ‘ಸಾಹಿತ್ಯ ಬಳಗ’, ನವಪೀಳಿಗೆಗೆ ಭಾರತದ ಬಗ್ಗೆ ಅರಿವು ಮೂಡಿಸಲು ‘ಪ್ರವಚನ ಸಮಿತಿ’; ಅಸ್ಮಿತೆಯನ್ನು ಎತ್ತಿ ತೋರಿಸಲು ‘ಶಿವಳ್ಳಿ ಪ್ರತಿಷ್ಠಾನ’-ಹೀಗೆ ಹತ್ತು ಹಲವು ಸಂಘ-ಸಂಸ್ಥೆಗಳನ್ನು ಕಟ್ಟಿಕೊಂಡು ಎಂಭತ್ತೆಂಟರ ಹರೆಯದಲ್ಲೂ ಕ್ರಿಯಾಶೀಲರಾಗಿದ್ದ ಎಚ್.ಬಿ.ಎಲ್. ರಾವ್ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಮರಾಠಿ ಮಣ್ಣಿನಲ್ಲಿ ಕನ್ನಡ ಸಾಹಿತ್ಯದ ಪರಿಚಾರಿಕೆಯನ್ನು ಮಾಡಿದವರು.

‘ಸತ್ಯ ವಿಜಯ’ ಎಂಬ ಯಕ್ಷಗಾನ ಪ್ರಸಂಗದ ಮೊದಲ ಭಾಗವನ್ನು 1964ರಲ್ಲಿ ರಚಿಸಿದ್ದ ರಾವ್ ಈಗಾಗಲೇ ನೂರೈವತ್ತಕ್ಕೂ ಹೆಚ್ಚು ಹಸ್ತಪ್ರತಿಯಲ್ಲಿದ್ದ ಯಕ್ಷಗಾನ ಪ್ರಸಂಗಗಳನ್ನು ಮುದ್ರಿಸಿ ಪ್ರಕಟಿಸಿದ್ದಾರೆ. ಯಕ್ಷಗಾನ ಸಾಹಿತ್ಯ ಸಮ್ಮೇಳನಗಳಲ್ಲಿ ಮಂಡಿಸಿದ ಪ್ರಬಂಧಗಳ ಸಂಕಲನಗಳನ್ನು ಸಂಪಾದಿಸಿ ಮಹತ್ವದ ಕೃತಿಗಳನ್ನು ಹೊರ ತಂದಿದ್ದಾರೆ. ಸಾಹಿತ್ಯ ಬಳಗದ ಮೂಲಕ ತುಳುನಾಡಿನ ವೌಖಿಕ ಮಹಾಕಾವ್ಯಗಳಾದ ಪಾಡ್ದನಗಳ ನೂರು ಧ್ವನಿಸುರುಳಿಗಳನ್ನು ಹೊರತಂದಿದ್ದಾರೆ. ಅಪರೂಪದ ಪಾಡ್ದನಗಳ ಆಯ್ಕೆ ಹಾಗೂ ಅಷ್ಟೇ ಆಕರ್ಷಕ ನೇಯ್ಗೆಯನ್ನು ಇಲ್ಲಿ ನಾವು ಕಾಣಬಹುದು. ಹಲವಾರು ಸಾಂದರ್ಭಿಕ ಗ್ರಂಥಗಳನ್ನು, ಅಭಿನಂದನಾ ಗ್ರಂಥಗಳನ್ನು ಸಂಪಾದಿಸಿರುವ ರಾವ್ ಮಹಾರಾಷ್ಟ್ರ ತುಳು ಕನ್ನಡಿಗರ ಸಿದ್ಧಿ-ಸಾಧನೆಗಳ ಯಶೋಗಾಥೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಸಾಹಿತ್ಯ ಬಳಗದ ಇಪ್ಪತ್ತೈದರ ಸಂಭ್ರಮವನ್ನು ಅರ್ಥಪೂರ್ಣವಾಗಿಸಲು ಇಲ್ಲಿನ ತೆರೆಮರೆಯ ಸಾಧಕರ ಕುರಿತು ಕೃತಿಗಳನ್ನು ಪ್ರಕಟಿಸುವ ಮೂಲಕ ಮತ್ತೊಂದು ಮೈಲಿಗಲ್ಲನ್ನು ದಾಟಿದ್ದಾರೆ. ಯಕ್ಷಗಾನದ ವೇಷ- ಭೂಷಣದ ಬಗ್ಗೆ ಆಕರ್ಷಕ ಕೃತಿ ತಂದಿರುವ ಎಚ್.ಬಿ.ಎಲ್.ರಾವ್ ಭೂತಾರಾಧನೆಯ ವೇಷ-ಭೂಷಣದ ಕುರಿತು ಬೃಹತ್ ಕೃತಿ ‘ಅಣಿ ಅರದಲ ಸಿರಿ ಸಿಂಗಾರ’ ಮುಂಬೈಯಿಂದ ಪ್ರಕಟಿತವಾಗಿರುವುದು ಮುಂಬೈ ಕನ್ನಡಿಗರಿಗೆ ಹೆಮ್ಮೆಯ ಗರಿ. ಈಗಾಗಲೇ ಬೆಳಕು ಕಂಡಿರುವ ವಿವಿಧ ಕೃತಿಗಳ ಒಟ್ಟು ಸಂಖ್ಯೆ ಇನ್ನೂರ ಮೂವತ್ತನ್ನು ಮೀರಿದೆ. ಸಂಖ್ಯೆಯ ದೃಷ್ಟಿಯಿಂದ ಮಾತ್ರ ಈ ಕೃತಿಗಳು ಉಲ್ಲೇಖಾರ್ಹವಲ್ಲ, ವೌಲ್ಯಯುತವಾಗಿಯೂ ಇವು ಗಮನಾರ್ಹವಾಗಿವೆ. ಒಂದು ಯೂನಿವರ್ಸಿಟಿ ಮಾಡಬಹುದಾದಂತಹ ಕಾರ್ಯಗಳನ್ನು ತಮ್ಮ ಆಪ್ತರೊಂದಿಗೆ ಸೇರಿ ಎಚ್.ಬಿ.ಎಲ್. ರಾವ್ ಮಾಡಿದ್ದಾರೆ. ಆ ಮೂಲಕ ನಾಡಿಗೆ, ಕರ್ಮಭೂಮಿಗೆ ಯೋಗ್ಯ ರೀತಿಯಲ್ಲಿ ಋಣ ಸಂದಾಯದ ಕಜ್ಜವನ್ನು ಮಾಡಿದ್ದಾರೆ. ಅವರ ಕನಸಿನ ಮತ್ತೊಂದು, ಮಗದೊಂದು ಸಮ್ಮೇಳನ ಕೃತಿ ಕುಸುಮಗಳು ನಡೆಯನ್ನು ಕಂಡುಕೊಳ್ಳುತ್ತಿದ್ದಂತೆ ಅವರು ಹಿಮ್ಮುಖವಾಗಿ ಸಾಗಿಬಿಟ್ಟರು.

ಹಲವಾರು ಸಂಘ-ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿ ದುಡಿದಿರುವ ರಾವ್, ಕೆಲ ಸ್ವಾರ್ಥಿಗಳು ಸಂಘ-ಸಂಸ್ಥೆಗಳನ್ನು ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗ ಪಡಿಸುತ್ತಿದ್ದಂತಹ ಸಂದರ್ಭಗಳಲ್ಲಿ ವೌನವಾಗಿ, ಮಾತಿನ ಮೂಲಕ, ಮಾಧ್ಯಮಗಳ ಮೂಲಕ, ಕೊನೆಗೆ ದಾರಿ ಕಾಣದೆ ಕೋರ್ಟು-ಕಚೇರಿ ತನಕವೂ ಹೋರಾಟಕ್ಕೆ ಮುಂದುವರಿದಿದ್ದನ್ನು ಕಾಣಬಹುದು. ಇದಕ್ಕೆ ಅವರಿಗೆ ಬರುತ್ತಿದ್ದ ಬೆದರಿಕೆಗಳಿಗೆ ಅವರು ಬಗ್ಗುತ್ತಿರಲಿಲ್ಲ. ಉದಾಹರಣೆಗೆ: ಕೆಲ ವರ್ಷಗಳ ಹಿಂದೆ ಒಂದು ಸಂಘದ ಕೆಲ ಪದಾಧಿಕಾರಿಗಳು ಸಂಘವನ್ನು ದುರುಪಯೋಗಪಡಿಸಿದ ಬಗ್ಗೆ ಮಾಧ್ಯಮದಲ್ಲಿ ಬರೆದಾಗ ಕೆಲವೊಂದು ಬೆದರಿಕೆಗಳು ಬಂದಿದ್ದನ್ನು ಆತ್ಮೀಯರಲ್ಲಿ ಹೇಳಿಕೊಂಡಿದ್ದರು. ಆ ಬೆದರಿಕೆಗೆ ತಣ್ಣಗಿದ್ದ ರಾವ್ ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ನೀಡಿ ಅಷ್ಟೇ ತಣ್ಣಗೆ ಆ ಸಂಘದ ವಾರ್ಷಿಕ ಮಹಾಸಭೆಗೆ ಹಾಜರಾಗಿದ್ದರು. ಮತ್ತೆ, ಆತ್ಮೀಯರೊಂದಿಗೆ ‘ನನಗೆ ಈ ಪ್ರಾಯದಲ್ಲಿ ಇದೆಲ್ಲ ಬೇಕಾ!’ ಎಂದು ವಿಷಾದದಿಂದ ಘಟನೆಗಳನ್ನು ವಿವರಿಸಿ ಮನನೊಂದು ಅಳುನುಂಗಿ ನಗುವನ್ನು ಮುಖದಲ್ಲಿ ತರುತ್ತಿದ್ದರು. ಆ ನಗುವಿನ ಹಿಂದೆ ಎಚ್.ಬಿ.ಎಲ್. ರಾವ್ ಅವರಿಗೆ ಆ ಸಂಘದ ಬಗ್ಗೆ ಇದ್ದ ಗೌರವ, ಕಳಕಳಿ ಸ್ಪಷ್ಟವಾಗಿ ವ್ಯಕ್ತವಾಗುತ್ತಿತ್ತು.

ಕೇವಲ ಮೈಕ್ ಹಿಡಿದುಕೊಂಡು ವೇದಿಕೆಯಲ್ಲಿ ಮೆರೆಯುವವರನ್ನು, ವೇದಿಕೆ ಇದ್ದರೆ ಮಾತ್ರ ಕಾರ್ಯಕ್ರಮಕ್ಕೆ ಬರುವವರನ್ನು, ಕುರ್ಚಿಗಾಗಿಯೇ ಕಾದಿರುವವರನ್ನು ಶೋಕ ಸಭೆಗಳಲ್ಲಿ ಅಥವಾ ಸ್ಮರಣ ಗ್ರಂಥಗಳಲ್ಲಿ ದಿವಂಗತರಿಗಿಂತ ತಮನ್ನೇ ತಾವು ‘ಹೈಲೈಟ್’ ಮಾಡಿಕೊಳ್ಳುವವರನ್ನು -ಮೊದಲಾದವರನ್ನು ಕಂಡರಾಗುತ್ತಿರಲಿಲ್ಲ. ಅದಕ್ಕೆ ಪ್ರರ್ಯಾಯ ಮಾರ್ಗಗಳನ್ನು ಕಂಡುಕೊಂಡು ಹೊಸ ಪ್ರಯೋಗಗಳನ್ನು ಮಾಡುತ್ತಿದ್ದರು. ಅವರ ಪ್ರಯೋಗಗಳ ಪರಿಣಾಮ ವೇದಿಕೆಗೆ ಅವಕಾಶವೇ ಸಿಗದ ಎಷ್ಟೋ ಪ್ರತಿಭೆಗಳು ಬೆಳಕಿಗೆ ಬಂದಿವೆ.

ಸಾಹಿತ್ಯ ಪರಿಷತ್ತಿನ ಕನ್ನಡ ಕಾವ, ಜಾಣ ಮೊದಲಾದ ಪರೀಕ್ಷಾ ಕೇಂದ್ರಗಳು ಮುಂಬೈಯಲ್ಲಿ ಆಗುವುದಕ್ಕೆ; ಸಂಗೀತ ಪರೀಕ್ಷೆಗಳು ಕೂಡ ಇಲ್ಲಿಯೇ ಜರಗುವುದಕ್ಕೆ ಸಂಬಂಧಪಟ್ಟ ಇಲಾಖೆಗಳನ್ನು ಸಂಪರ್ಕಿಸಿ ಯಶಸ್ಸುಗಳಿಸಿದ್ದ ಮೇಧಾವಿ ಎಚ್.ಬಿ.ಎಲ್. ರಾವ್, ಕರ್ನಾಟಕ ಸರಕಾರವು ‘ಕರ್ನಾಟಕ ಭವನ’ಕ್ಕಾಗಿ ನವಿಮುಂಬೈಯಲ್ಲಿ ಖರೀದಿಸಿದ್ದ ಭೂಮಿಯಲ್ಲಿ ಕಟ್ಟಡ ನಿರ್ಮಾಣವಾಗದೆ ಕೈಯಿಂದ ತಪ್ಪಿಹೋಗುವ ಸ್ಥಿತಿಯಲ್ಲಿದ್ದಾಗ ಕರ್ನಾಟಕದ ಮುಖ್ಯಮಂತ್ರಿಗಳಿಂದ ಹಿಡಿದು ಹಲವಾರು ಅಧಿಕಾರಿಗಳನ್ನು ಸಂಪರ್ಕಿಸಿ ಕೊನೆಗೂ  ಅಲ್ಲೊಂದು ‘ಭವನ’ ಆಗುವಂತೆ ಎಚ್ಚರಿಸಿದ್ದರು. ಆದರೆ ಆ ಭವನ ಮುಂಬೈ ಕನ್ನಡಿಗರ ಯಾವುದೇ ಉಪಯೋಗಕ್ಕೆ ಬಾರದೇ ಇರುವುದು, ಅಲ್ಲಿ ಮುಂಬೈ ಕನ್ನಡಿಗರಿಗೆ ಯಾವ ಪ್ರಾಶಸ್ಯವೂ ದೊರೆಯದಿರುವುದು ಮುಂಬೈ ಕನ್ನಡಿಗರ ಪ್ರಾರಬ್ಧ ಅನ್ನೋಣವೇ; ಅಥವಾ ಕಣ್ಣು ಮುಚ್ಚಿ ಕುಳಿತು ತಮ್ಮ ಅಧಿಕಾರಕ್ಕಾಗಿ ಜಪಿಸುತ್ತಿರುವ ರಾಜಕಾರಣಿಗಳು, ಅಧಿಕಾರಿಗಳ ಅಭಿಮಾನ ಶೂನ್ಯಕ್ಕೆ ಪ್ರತೀಕ ಅನ್ನೋಣವೆ!

ಕೆಲ ವಿಕೃತ ಮನಸ್ಸುಗಳು ಅಸಹಾಯಕ ಸ್ತ್ರೀಯರನ್ನು ದುರುಪಯೋಗ ಪಡಿಸುತ್ತಿದ್ದಾಗ ಮಧ್ಯವರ್ತಿಯಾಗಿ ಅಂತಹವರಿಂದ ಅಸಹಾಯಕ ಸ್ತ್ರೀಯರನ್ನು ರಕ್ಷಿಸುತ್ತಿದ್ದ ಉದಾಹರಣೆಗಳು ರಾವ್ ಅವರ ಬದುಕಿನಲ್ಲಿ ಘಟಿಸಿವೆ.

‘ತಮ್ಮ ಸಿಟ್ಟು ವ್ಯಕ್ತಿಗತವಲ್ಲ’ ಎಂದು ಹೇಳುತ್ತಿದ್ದ ಎಚ್.ಬಿ.ಎಲ್. ರಾವ್ ಬಹುಶಃ ಜಗಳವಾಡದೆ ಇದ್ದ ಸಾಹಿತಿಗಳು, ಮಠಾಧೀಶರು, ಸಮಾಜ ಸೇವಕರು, ಸಂಘಟಕರು, ರಾಜಕೀಯ ಧುರೀಣರು, ಜ್ಯೋತಿಷಿಗಳು, ಪುರೋಹಿತರು ಯಾರೂ ಇಲ್ಲ ಅನ್ನಿಸುವಷ್ಟು ಮಂದಿಯೊಂದಿಗೆ ತಮ್ಮ ಸಾತ್ವಿಕ ಸಿಟ್ಟನ್ನು ತೋರಿಸಿದ್ದಾರೆ. ತಮ್ಮ ಮೂರು ಸ್ವಂತ ರಚನೆಯ ಕೃತಿಗಳಲ್ಲಿ ತಮ್ಮ ಅಸಮಾಧಾನ, ಸಿಟ್ಟು, ಪ್ರತಿಭಟನೆಯನ್ನು ಮಾರ್ಮಿಕವಾಗಿ ವಿಡಂಬನೆಯ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ.

ತಾನು ಬಡ ಬ್ರಾಹ್ಮಣ ಎಂದು ಹೇಳುತ್ತಲೇ ಹಲವಾರು ವಿದ್ಯಾರ್ಥಿಗಳಿಗೆ ವಿದ್ಯೆ ಮುಂದುವರಿಸಲು ಪ್ರತಿ ವರ್ಷ ಸಹಕರಿಸುತ್ತಾ ಬರುತ್ತಿದ್ದ ಎಚ್.ಬಿ. ಎಲ್.ರಾವ್; ಸಂಗೀತದ ವಿದ್ಯಾರ್ಥಿಗಳಿಗೆ ಹಾರ್ಮೋನಿಯಂ, ತಬಲ, ವೀಣೆ, ಮೃದಂಗ-ಹೀಗೆ ಹಲವಾರು ವಾದ್ಯಗಳನ್ನು ತಮ್ಮ ಪೆನ್ಶನ್ ಹಣದಿಂದ ಒಂದಿಷ್ಟು ಭಾಗವನ್ನು ಬಳಸಿ ಒದಗಿಸಿಕೊಡುತ್ತಿದ್ದರು.

‘ಬಲಿಪ ನಾರಾಯಣ ಭಾಗವತ ಸಾಹಿತ್ಯ ಪ್ರಶಸ್ತಿ’ಯಿಂದ ಮೊದಲ್ಗೊಂಡು, ಎಪ್ಪತ್ತನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದೊರೆತ ‘ಕರ್ನಾಟಕ ಶ್ರೀ’ ಪ್ರಶಸ್ತಿ, ಎ.ಎಸ್. ನಾವಡ ಯಕ್ಷಗಾನ ಸಾಹಿತ್ಯ ಪ್ರಶಸ್ತಿ- ಮೊದಲಾದ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿರುವ ಎಚ್.ಬಿ.ಎಲ್. ರಾವ್, ಎಂ.ಎ., ಎಲ್.ಎಲ್.ಬಿ. ಆಗಿದ್ದರೂ ತನಗೆ ಭಡ್ತಿ ದೊರೆತು ಬೇರೆಡೆ ಕಳುಹಿಸಲ್ಪಡುತ್ತೇನೆ ಎಂದು ಕೊನೆಯ ತನಕವೂ ಕಚೇರಿಯಲ್ಲಿ ತಮ್ಮ ಡಿಗ್ರಿಗಳ ಬಗ್ಗೆ ಚಕಾರವೆತ್ತದ ವಾಮನ ಮೂರ್ತಿ.

ಇಂತಹ ಸೌಜನ್ಯಮೂರ್ತಿ, ಧೀಮಂತ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಸಾರ್ಥಕ ಬದುಕನ್ನು ಅರ್ಥಪೂರ್ಣವಾಗಿ ಬಾಳಿದ ಬಾಗಿಲ್ತಾಯ ಅವರಿಗೆ ಅಕ್ಷರ ನಮನ.

share
ದಯಾನಂದ ಸಾಲ್ಯಾನ್
ದಯಾನಂದ ಸಾಲ್ಯಾನ್
Next Story
X