ಕನಿಕರ ಇಲ್ಲದ ಸರಕಾರ: ರಮಾನಾಥ ರೈ

ಮಂಗಳೂರು, ಫೆ.19: ಡೀಸೆಲ್ ಮತ್ತು ಪೆಟ್ರೋಲ್ ದರ ಸಹಿತ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಗಟ್ಟಲಾಗದ ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಎ ಸರಕಾರವು ಜನಸಾಮಾನ್ಯರ ಮೇಲೆ ಕನಿಕರ ಇಲ್ಲದ ಸರಕಾರವಾಗಿದೆ ಎಂದು ದ.ಕ.ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ರಮಾನಾಥ ರೈ ಟೀಕಿಸಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಅಧಿಕಾರಕ್ಕೇರಿದ ಬಿಜೆಪಿ ಜನರ ಹಿತ ಕಾಪಾಡುವ ಬದಲು ಕಾರ್ಪೊರೇಟ್ ಕಂಪೆನಿಗಳ ಪರವಾಗಿ ಕಾರ್ಯನಿರ್ವಹಿಸುವ ಪಕ್ಷ ಎಂದು ಸಾಬೀತುಪಡಿಸಿದೆ. ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿದ್ದರೂ ಕೂಡ ಬೆಲೆ ಏರಿಕೆಯನ್ನು ಕಡಿವಾಣ ಹಾಕದ ಯುಪಿಎ ಸರಕಾರದ ಮೇಲೆ ಗೂಬೆ ಕೂರಿಸುತ್ತಿದೆ. ಕೇಂದ್ರ ಸರಕಾರದ ಈ ಧೋರಣೆ ಮತ್ತು ನುಣುಚಿಕೊಳ್ಳುವ ಕೃತ್ಯವನ್ನು ಖಂಡಿಸಿ ದೊಡ್ಡಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಅಧ್ಯಕ್ಷ ಕೆ ಹರೀಶ್ ಕುಮಾರ್, ಯುವ ಕಾಂಗ್ರೆಸ್ ದ.ಕ.ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ, ಮಾಜಿ ಶಾಸಕ ಜೆ.ಆರ್. ಲೋಬೋ, ಮುಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೊಡಿಜಾಲ್, ದ.ಕ.ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ವಿಶ್ವಾಸ ಕುಮಾರ್ ದಾಸ್, ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಾಹುಲ್ ಹಮೀದ್, ಪಕ್ಷದ ಮುಖಂಡರಾದ ಸದಾಶಿವ ಉಳ್ಳಾಲ್, ಯು ಬಿ ಸಲೀಂ ಉಳ್ಳಾಲ್, ಜಯಶೀಲಾ ಅಡ್ಯಾಂತಯ, ಅಬ್ಬಾಸ್ ಅಲಿ ಬೋಳಂತೂರು, ಬಿ ಎಂ, ಸುರೇಶ್ ಶೆಟ್ಟಿ, ನಝೀರ್ ಬಜಾಲ್, ನಿತ್ಯಾನಂದ ಶೆಟ್ಟಿ, ಶುಭೋದಯ ಅಳ್ವಾ ಮತ್ತಿತರರು ಉಪಸ್ಥಿತರಿದ್ದರು.







