ಖಾಸಗೀಕರಣ ವಿರುದ್ಧ ಬ್ಯಾಂಕ್ ಯೂನಿಯನ್ ಗಳಿಂದ ಪ್ರತಿಭಟನೆ: ಸಂಸತ್ ಮಾರ್ಚ್ ನಡೆಸಲು ಚಿಂತನೆ

ಹೊಸದಿಲ್ಲಿ: ಕೇಂದ್ರ ಸರಕಾರದ ಖಾಸಗೀಕರಣ ಉದ್ದೇಶವನ್ನು ವಿರೋಧಿಸಿ ಬ್ಯಾಂಕ್ ಯೂನಿಯನ್‍ಗಳು ಶುಕ್ರವಾರ ದೇಶದ ವಿವಿಧ ರಾಜ್ಯಗಳ ರಾಜಧಾನಿಗಳಲ್ಲಿ ಪ್ರತಿಭಟನೆಗಳನ್ನು ನಡೆಸಿವೆ. ಉದ್ಯೋಗಿಗಳ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಮುಂದಿನ ತಿಂಗಳು ಸಂಸತ್ ಮಾರ್ಚ್ ನಡೆಸಲಾಗುವುದು ಎಂದು ಅಖಿಲ ಭಾರತ್ ಬ್ಯಾಂಕ್ ಉದ್ಯೋಗಿಗಳ ಸಂಘ ಹೇಳಿದೆ.
ಹೊಸದಿಲ್ಲಿ: ಮುಂದಿನ ಹದಿನೈದು ದಿನಗಳ ಕಾಲ ದೇಶದ ವಿವಿಧ ಭಾಗಗಳಲ್ಲಿ ಬ್ಯಾಂಕ್ ಯೂನಿಯನ್‍ಗಳು ಪ್ರತಿಭಟನೆ ನಡೆಸಲಿವೆ ಎಂದು ಸಂಘ ಹೇಳಿದೆ. ಮಾರ್ಚ್ 15 ಹಾಗೂ 16ರಂದು ಎರಡು ದಿನಗಳ ಪರ್ಯಂತ ಮುಷ್ಕರವನ್ನು 10 ಲಕ್ಷಕ್ಕೂ ಅಧಿಕ ಬ್ಯಾಂಕ್ ಉದ್ಯೋಗಿಗಳು ಮತ್ತು ಅಧಿಕಾರಿಗಳು ನಡೆಸಲಿದ್ದಾರೆ. ಸರಕಾರ ತನ್ನ ಯೋಜನೆಯನ್ನು ಮುಂದುವರಿಸಿದರೆ ಬ್ಯಾಂಕ್ ಉದ್ಯೋಗಿಗಳು ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿ ಅನಿರ್ದಿಷ್ಟ ಮುಷ್ಕರ ಹೂಡಲಿದ್ದಾರೆ. ಸರಕಾರ ತನ್ನ ಖಾಸಗೀಕರಣ ನೀತಿಯನ್ನು ಮರುಪರಿಶೀಲಿಸಬೇಕು" ಎಂದು ಸಂಘ ಹೇಳಿದೆ.
ಕೇಂದ್ರ ಸರಕಾರ ಎರಡು ಸಾರ್ವಜನಿಕ ರಂಗದ ಬ್ಯಾಂಕ್‍ಗಳನ್ನು ಖಾಸಗೀಕರಣಗೊಳಿಸಲಿದೆ ಎಂದು ತಮ್ಮ ಬಜೆಟ್‍ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಯುನೈಟೆಡ್ ಫೋರಂ ಆಫ್ ಯೂನಿಯನ್ಸ್ ಆಶ್ರಯದಲ್ಲಿ ಒಂಬತ್ತು ಸಂಘಟನೆಗಳು ಸರಕಾರದ ನೀತಿಯ ವಿರುದ್ಧ ಹೋರಾಡುತ್ತಿವೆ ಎಂದು ಸಂಘ ತನ್ನ ಹೇಳಿಕೆಯಲ್ಲಿ ತಿಳಿಸಿದೆ.





