ಟೂಲ್ ಕಿಟ್ ಪ್ರಕರಣ: ಮತ್ತೆ ಮೂರು ದಿನಗಳ ಕಾಲ ದಿಶಾ ರವಿ ಪೊಲೀಸ್ ಕಸ್ಟಡಿಗೆ

ಹೊಸದಿಲ್ಲಿ: ಅಂತಾರಾಷ್ಟ್ರೀಯ ತಾರೆಯರಿಗೆ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಕುರಿತಾದಂತೆ ಟೂಲ್ ಕಿಟ್ ನೀಡಿದ್ದಾರೆಂಬ ಆರೋಪದ ಮೇರೆಗೆ ಪರಿಸರ ಕಾರ್ಯಕರ್ತೆ ದಿಶಾ ರವಿಯವರನ್ನು ಪೊಲೀಸರು ಬಂಧಿಸಿದ್ದರು. ಅವರ ಟೂಲ್ ಕಿಟ್ ನಿಂದಾಗಿಯೇ ಗಣರಾಜ್ಯೋತ್ಸವ ದಿನದಂದು ಹಿಂಸಾಚಾರ ನಡೆಯಿತು ಎಂದು ಪೊಲೀಸರು ಹೇಳಿಕೆ ನೀಡಿದ್ದರು. ಇದೀಗ ಇಂದು ನ್ಯಾಯಾಲಯಕ್ಕೆ ಹಾಜರಾದ ದಿಶಾ ರವಿಯವರ ಪೊಲೀಸ್ ಕಸ್ಟಡಿಯನ್ನು ಇನ್ನೂ ಮೂರು ದಿನಗಳ ಕಾಲ ವಿಸ್ತರಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ತಿಂಗಳ ಆರಂಭದಲ್ಲಿ ಸ್ವೀಡಿಷ್ ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ಅವರು ಟ್ವೀಟ್ ಮಾಡಿ ನಂತರ ಅಳಿಸಿದ್ದ ಆನ್‌ಲೈನ್ ಗೂಗಲ್ ಡಾಕ್ಯುಮೆಂಟ್ ಅನ್ನು ದಿಶಾ ರವಿ ಮತ್ತು ಇತರ ಇಬ್ಬರು ಕಾರ್ಯಕರ್ತರಾದ ನಿಕಿತಾ ಜಾಕೋಬ್ ಮತ್ತು ಶಂತನು ಮುಲುಕ್ ರಚಿಸಿದ್ದಾರೆ ಎಂದು ಪೊಲೀಸರು ಈ ವಾರದ ಆರಂಭದಲ್ಲಿ ತಿಳಿಸಿದ್ದರು. "ದಿಶಾ ಅವರ ಫೋನ್‌ನಿಂದ ಹೆಚ್ಚಿನ ದೋಷಾರೋಪಣೆಯ ಮಾಹಿತಿಯನ್ನು ವಶಪಡಿಸಿಕೊಳ್ಳಲಾಗಿದೆ, ಇದರಿಂದಾಗಿ ಅವರು ಶಂತನು ಮತ್ತು ನಿಕಿತಾ ಅವರೊಂದಿಗೆ ಡಾಕ್ಯುಮೆಂಟ್ ತಯಾರಿಸಿ ಇತರರಿಗೆ ಕಳುಹಿಸಿದ್ದಾರೆ ಎಂದು ಸ್ಪಷ್ಟವಾಗುತ್ತದೆ" ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿ ಪ್ರೇಮ್ ನಾಥ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.





