ಮದ್ಯವ್ಯಸನಿಗಳ ಮಕ್ಕಳಲ್ಲಿ ಒಂಟಿತನ, ಕೀಳರಿಮೆ ಸಮಸ್ಯೆ: ಡಾ.ಭಂಡಾರಿ

ಉಡುಪಿ, ಫೆ.19: ಪೋಷಕರಿಗೆ ಕುಡಿತದ ಚಟ ಇದ್ದರೆ ಮಕ್ಕಳು ಕೂಡ ಅದೇ ಚಟವನ್ನು ಬೆಳಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಮುಖ್ಯವಾಗಿ ಮಕ್ಕಳು ಒಂಟಿತನ ಹಾಗೂ ಏಕಾಂತ ಜೀವನದಂತಹ ಕೀಳರಿಮೆಯಿಂದ ಬಳಲುವ ಸನ್ನಿವೇಶಗಳೂ ಎದುರಾಗಲಿವೆ. ಮಕ್ಕಳು ಮಾದಕ ವ್ಯಸನಕ್ಕೆ ಬಲಿಯಾಗದಂತೆ ಪೋಷಕರು ಜಾಗರೂಕತೆ ವಹಿಸಿಕೊಳ್ಳಬೇಕು ಎಂದು ಉಡುಪಿ ಡಾ.ಎ.ವಿ. ಬಾಳಿಗಾ ಆಸ್ಪತ್ರೆ ನಿರ್ದೇಶಕ, ಮನೋವೈದ್ಯ ಡಾ.ಪಿ.ವಿ.ಭಂಡಾರಿ ಹೇಳಿದ್ದಾರೆ.
ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ, ರೋಟರಿ ಕ್ಲಬ್ ಮಣಿಪಾಲ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಉಡುಪಿ- ಕರಾವಳಿ ಇದರ ಆಶ್ರಯದಲ್ಲಿ ಆಸ್ಪತ್ರೆಯ ಕಮಲ್ ಎ.ಬಾಳಿಗ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾದ ಮದ್ಯವ್ಯಸನಿ ಮಕ್ಕಳ ಜಾಗೃತಿ ಸಪ್ತಾಹದ ಪ್ರಯುಕ್ತ ವ್ಯಂಗ್ಯಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ರಾಫ್ಟ್ ಮಂತ್ರದ ಸಂಸ್ಥಾಪಕಿ ರೇಣು ಜಯರಾಮ್ ಮಾತನಾಡಿ, ಮಾದಕ ವ್ಯಸನ ಚಟುವಟಿಕೆಗಳು ಹೆಚ್ಚಳವಾಗುತ್ತಿ ರುವುದರಿಂದ ಸಮಾಜದಲ್ಲಿ ಕೌಟುಂಬಿಕ ಕಲಹಗಳು ಹೆಚ್ಚು ಹೆಚ್ಚು ನಡೆಯು ತ್ತಿವೆ. ಇದಕ್ಕೆ ಕಡಿವಾಣ ಹಾಕುವುದು ಅಗತ್ಯ ವಾಗಿದೆ. ಕಾರ್ಟೂನ್‌ಗಳು ಜನರಿಗೆ ಭಾವನೆಗಳನ್ನು ಬೇಗನೆ ಅರ್ಥೈಸುವಂತೆ ಮಾಡುತ್ತದೆ. ಕಲೆಗೆ ಅದರದ್ದೇ ಆದ ಮಹತ್ವವಿದ್ದು, ಕಲೆಯಿಂದ ಸೃಜನಶೀಲತೆ ಬೆಳೆಸಲು ಸಾಧ್ಯವಿದೆ ಎಂದರು.
ಹಿರಿಯ ವ್ಯಂಗ್ಯಚಿತ್ರಕಾರ ಜೇಮ್ಸ್ ವಾಝ್ ಮಾತನಾಡಿ, ಸರಕಾರದ ಧೋರಣೆಗಳ ವಿರುದ್ಧ ಕಾರ್ಟೂನ್‌ಗಳಿಂದಷ್ಟೇ ನೇರವಾಗಿ ವಿಷಯಗಳನ್ನು ತಿಳಿಯಪಡಿಸಲು ಸಾಧ್ಯವಿದೆ. ವೈದ್ಯರು ರೋಗ ಗುಣಪಡಿಸಲು ಕಹಿ ಔಷಧ ನೀಡಿದರೆ, ವ್ಯಂಗ್ಯ ಚಿತ್ರಕಾರರು ಕಹಿಯಾದ ವಸ್ತುವಿಗೆ ಸಿಹಿಯಾದ ಲೇಪನ ನೀಡಿ ಜನರಿಗೆ ನಾಟು ವಂತೆ ಮಾಡುತ್ತಾರೆ ಎಂದು ತಿಳಿಸಿದರು.
ಬಾರಕೂರು ಎಸ್‌ಆರ್‌ಎಸ್‌ಎಂಎಂಜಿಎಸ್‌ಐ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ.ಹೇಮಾ ಎಸ್.ಕೊಡದ್, ವಿದ್ಯಾರತ್ನ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಅನಿತಾ ಸಿ.ರಾವ್, ಆಸ್ಪತ್ರೆಯ ಮನೋ ವೈದ್ಯ ಡಾ.ವಿರೂಪಾಕ್ಷ ದೇವರಮನೆ ಉಪಸ್ಥಿತರಿದ್ದರು.
ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯಾ ಶೆಟ್ಟಿ ಸ್ವಾಗತಿಸಿದರು. ಸಲಹೆಗಾರ ಗಿರೀಶ್ ಎಂ.ಎನ್. ವಂದಿಸಿದರು. ನಾಗರಾಜ್ ಟಿ.ಪಿ. ಮತ್ತು ದಿವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಈ ಸಂಬಂಧ ಸುಮಾರು 50ಕ್ಕೂ ಅಧಿಕ ವಿವಿಧ ವ್ಯಂಗ್ಯ ಚಿತ್ರಕಾರರು ರಚಿಸಿರುವ ವ್ಯಂಗ್ಯಚಿತ್ರಗಳನ್ನು ಪ್ರದರ್ಶಿಸಲಾಗಿತ್ತು.







