ಕಿಶೋರಿಯರಿಗೆ ಆರೋಗ್ಯ-ಜೀವನ ಕೌಶಲ್ಯ ಅರಿವು ಕಾರ್ಯಾಗಾರ

ಕುಂದಾಪುರ, ಫೆ.19: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಶಿಶು ಅಭಿವೃದ್ಧಿ ಯೋಜನೆ ಕುಂದಾಪುರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಶಕ್ತಿ ಕೇಂದ್ರ ಉಡುಪಿ ಜಿಲ್ಲೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ಭೇಟಿ ಬಚಾವೋ ಬೇಟಿ ಪಡಾವೋ ಅಂಗವಾಗಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಹಾಗೂ ಕಿಶೋರಿ ಯರಿಗೆ (ಹದಿಹರೆ ಯದವರಿಗೆ) ಆರೋಗ್ಯ ಮತ್ತು ಜೀವನ ಕೌಶಲ್ಯದ ಅರಿವು ಕಾರ್ಯಾಗಾರವನ್ನು ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ. ಮಾತನಾಡಿ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹಾಗೂ ಮಹಿಳೆಯರ ಅಭಿವೃದ್ಧಿ ಗಾಗಿ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳ ಬೇಕು. ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಬಹಳ ಮಹತ್ವದ್ದಾಗಿದೆ ಎಂದು ತಿಳಿಸಿದರು.
ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಪೋಕ್ಸೋ ಕಾಯಿದೆ, ಲಿಂಗ ಸಮಾನತೆ ಹಾಗೂ ಹದಿಹರೆಯದ ಆರೋಗ್ಯದ ಕುರಿತು ಮಾಹಿತಿ ನೀಡಿದರು. ಹೆಣ್ಣು ಮಕ್ಕಳಿಗೆ ಬೇಟಿ ಬಚಾವೋ ಬೇಟಿ ಪಡಾವೋ ಕುರಿತು ಚಿತ್ರಕಲೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಹಾಯಕ ಶಿಶು ಅಭಿವೃದ್ಧಿ ಯೋಜಾನಾಧಿಕಾರಿ ಶೋಭಾ ಆರ್.ಶೆಟ್ಟಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಉಪನ್ಯಾಸಕ ಉದಯ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಪವಿತ್ರ ಮರಾಟಿ ವಂದಿಸಿದರು. ಮಹಿಳಾ ಶಕ್ತಿ ಕೇಂದ್ರದ ಜಿಲ್ಲಾ ಸಂಯೋಜಕಿ ಅನುಷ್ಯಾ ಕಾರ್ಯಕ್ರಮ ನಿರೂಪಿಸಿದರು.







