ನೂತನ ಕೃಷಿ ಕಾಯ್ದೆಗಳಿಂದ ದೇಶದ ಕೃಷಿ ವ್ಯವಸ್ಥೆಗೆ ಇನ್ನಷ್ಟು ಸಂಕಷ್ಟ: ಚಿಂತಕ ಶಿವಸುಂದರ್

ದಾವಣಗೆರೆ, ಫೆ.19: ದೇಶದ ಕೃಷಿ ವ್ಯವಸ್ಥೆಯನ್ನು ನೂತನ ಕೃಷಿ ಕಾಯ್ದೆಗಳು ಸುಧಾರಣೆ ಮಾಡುವ ಬದಲು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಲಿವೆ ಎಂದು ಹಿರಿಯ ಪತ್ರಕರ್ತ, ಚಿಂತಕ ಶಿವಸುಂದರ್ ಆತಂಕ ವ್ಯಕ್ತಪಡಿಸಿದರು.
ಇಲ್ಲಿನ ಎಪಿಎಂಸಿ ಆವರಣದಲ್ಲಿ ರಾಜ್ಯ ರೈತ ಸಂಘ, ಹಸಿರುಸೇನೆಯ ಹುಚ್ಚವಹಳ್ಳಿ ಮಂಜುನಾಥ್ ಬಣದಿಂದ ಕೃಷಿ ಕಾಯ್ದೆಗಳ ತಿದ್ದುಪಡಿ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ‘ಕೃಷಿ ಕಾಯ್ದೆಗಳ ಇಂದಿನ ರಾಜಕೀಯ ಹುನ್ನಾರ’ ವಿಷಯ ಕುರಿತು ಅವರು ಮಾತನಾಡಿದರು.
ಕೇಂದ್ರ ಸರಕಾರದ ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿ, ಗುತ್ತಿಗೆ ಬೇಸಾಯ ಪದ್ಧತಿ, ವಿದ್ಯುತ್ ಕಾಯ್ದೆ ತಿದ್ದುಪಡಿ ಮತ್ತು ಅಗತ್ಯ ವಸ್ತುಗಳ ಕಾಯ್ದೆಗಳು ಮೇಲುನೋಟಕ್ಕೆ ರೈತರ ಪರವಾಗಿ ಇದೆ ಎಂದು ಭಾವಿಸಿದರೂ ಒಳಗೆ ಕರಾಳ ಅಂಶಗಳನ್ನು ಒಳಗೊಂಡಿವೆ. ಇಂತಹ ಕಾಯ್ದೆಗಳಿಂದ ರೈತರ ಆದಾಯ ದ್ವಿಗುಣಗೊಳ್ಳುವ ಬದಲಿಗೆ ಕೃಷಿಯಿಂದಲೇ ಸಂಪೂರ್ಣ ವಿಮುಖವಾಗಬೇಕಾಗುತ್ತದೆ. ಉಳ್ಳವರಿಂದ ಕಿತ್ತುಕೊಂಡು ರೈತರು ಮತ್ತು ಜನಸಾಮಾನ್ಯರಿಗೆ ಕೊಡುವ ಬದಲು ಸಾಮಾನ್ಯ ಜನರಿಂದ ಕಿತ್ತುಕೊಂಡು ಅಂಬಾನಿ, ಅದಾನಿಯಂತಹ ಶ್ರೀಮಂತರನ್ನು ಉದ್ಧಾರದ ಹುನ್ನಾರ ನೂತನ ಕಾಯ್ದೆಗಳಲ್ಲಿದೆ ಎಂದರು.
2015 ರಿಂದ ದೇಶದಲ್ಲಿ 4 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ಕ್ಷೇತ್ರ ಬಿಕ್ಕಟ್ಟಿನಲ್ಲಿರುವುದೇ ಇದಕ್ಕೆ ಮುಖ್ಯ ಕಾರಣ. ರೈತೋತ್ಪನಗಳಿಗೆ ಬೆಲೆ ಇಲ್ಲದಿರುವುದು, ಸರ್ಕಾರಗಳಿಂದ ಪ್ರೋತ್ಸಾಹ ಸಿಗದೇ ಇರುವ ಸಮಸ್ಯೆಗಳಿಗೆ ಪರಿಹಾರ ರೂಪದಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ ಈ ಕಾಯ್ದೆ ಹಂತ ಹಂತವಾಗಿ ಖಾಸಗಿ ಮಂಡಿಗಳಿಗೆ ಮಣೆಹಾಕಿ ಇದೀಗ ಇರುವ ಎಪಿಎಂಸಿ ವ್ಯವಸ್ಥೆಯನ್ನೆ ಸಂಪೂರ್ಣ ಸಾಯಿಸುತ್ತದೆ. ಇದಕ್ಕೆಲ್ಲ ಮುಖ್ಯ ಕಾರಣ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಇಲ್ಲದಿರುವುದು ಎಂದು ತಿಳಿಸಿದರು.
ಗುತ್ತಿಗೆ ಬೇಸಾಯ ಪದ್ಧತಿ, ವಿದ್ಯುತ್‍ಚ್ಛಕ್ತಿ ಕಾಯ್ದೆ ಮತ್ತು ಅಗತ್ಯ ವಸ್ತುಗಳ ಕಾಯ್ದೆಗಳಿಗೆ ತಿದ್ದುಪಡಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಶೀಘ್ರದಲ್ಲಿಯೇ ಕೇಂದ್ರ ಸರ್ಕಾರ ಇದೇ ಮಾದರಿಯ ಇನ್ನೂ 4 ಕಾಯ್ದೆಗಳನ್ನು ಜಾರಿಗೆ ತರುವ ಹುನ್ನಾರ ನಡೆಸಿದೆ. 2022ರ ವೇಳೆಗೆ ದೇಶದ ರೈತನನ್ನು ಅವರ ಜಮೀನುಗಳಿಂದ ಹೊರ ಹಾಕಿ ಎಲ್ಲ ಕ್ಷೇತ್ರಗಳನ್ನು ಖಾಸಗಿ ವಲಯಕ್ಕೆ ಒಪ್ಪಿಸುವ ಷಡ್ಯಂತ್ರ ನಡೆಯುತ್ತಿದೆ. ಇದರ ಬಗ್ಗೆ ದೇಶದ ರೈತರು ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ ಎಂದು ಹೇಳಿದರು.
ಸಿಪಿಐ ರಾಜ್ಯ ಮಂಡಳಿ ಸದಸ್ಯ ಸಿದ್ದನಗೌಡ ಪಾಟೀಲ್ ಮಾತನಾಡಿ, ಭೂ ಸುಧಾರಣೆ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಬಂಡವಾಳ ಶಾಹಿಗಳು ಭೂ ಒಡೆಯರಾಗಲು ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಕೃಷಿಕನೇ ಇಲ್ಲದ ಕೃಷಿ ವ್ಯವಸ್ಥೆಯನ್ನು ಜಾರಿಗೆ ತರಲು ಹೊರಟಿದ್ದಾರೆ. ಚುನಾವಣಾ ಸಮಯದಲ್ಲಿ ದೇಣಿಗೆ ನೀಡಿರುವ ಅಂಬಾನಿ, ಅದಾನಿಯವರ ಋಣ ತೀರಿಸಲು ಇದೀಗ ಕಾಯ್ದೆಗಳನ್ನು ವಾಪಾಸು ಪಡೆದುಕೊಳ್ಳಲು ಮೋದಿ ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಸಂಸತ್ತಿನಲ್ಲಿ ಚಕಾರ ಎತ್ತಲೂ ಕೂಡ ದೇಶದ ಯಾವುದೇ ಸಂಸದರಿಗೂ ಸಾಧ್ಯವಾಗುತ್ತಿಲ್ಲ. ನೂತನ ಕಾಯ್ದೆ ಅಂಬಾನಿ, ಅದಾನಿ ಪರವಾಗಿದೆಯೇ ಹೊರತು ದೇಶದ ಯಾವೊಬ್ಬ ರೈತನ ಪರವಾಗಿ ಇಲ್ಲ. ಈ ರೀತಿಯ ವಿಚಾರಗಳನ್ನು ವಿರೋಧಿಸುವವರನ್ನು ಪಾಕಿಸ್ತಾನಿಯರು, ಖಲಿಸ್ತಾನಿಯರು, ದೇಶ ವಿರೋಧಿಗಳು ಎಂದು ಬಿಂಬಿಸಲಾಗುತ್ತಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಎಐಟಿಯುಸಿ ಮುಖಂಡ ಎಚ್.ಕೆ.ರಾಮಚಂದ್ರಪ್ಪ ಮಾತನಾಡಿ, ತಿದ್ದುಪಡಿ ಕಾಯ್ದೆಗಳ ಪರಿಣಾಮಗಳ ಬಗ್ಗೆ ರೈತರು ಹೆಚ್ಚು ತಿಳಿದುಕೊಳ್ಳಬೇಕು. ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮೋದಿ ರಾವಣನಂತೆ ಆಡಳಿತ ನಡೆಸುತ್ತಿದ್ದಾರೆ. ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಈ ಬಗ್ಗೆ ಎಲ್ಲರೂ ಜಾಗೃತರಾಗಬೇಕು. ಅನೇಕ ಸ್ವಾಮೀಜಿಗಳು ಮೀಸಲಾತಿಗಾಗಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಮೀಸಲಾತಿ ಸಿಕ್ಕರೂ ಕೂಡ ಸರ್ಕಾರಿ ಉದ್ಯೋಗ ಸಿಗುವುದು ಕಷ್ಟ. ಏಕೆಂದರೆ ಸರ್ಕಾರ ಎಲ್ಲವನ್ನು ಖಾಸಗಿಗೆ ವಹಿಸುವ ಸಂಚು ನಡೆಸಿದೆ. ಆದ್ದರಿಂದ ಸ್ವಾಮೀಜಿಗಳು ತಮ್ಮ ಹೋರಾಟದಲ್ಲಿ ಖಾಸಗೀಕರಣ ವಿರೋಧಿ ಅಂಶಗಳನ್ನು ಮತ್ತು ರೈತರ ಹೋರಾಟಕ್ಕೆ ಬೆಂಬಲ ಸೂಚಿಸುವ ಅಂಶಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಹಿರಿಯ ಪತ್ರಕರ್ತ ಬಿ.ಎನ್.ಮಲ್ಲೇಶ್ ಮಾತನಾಡಿ, ಇಂದು ಬಹುತೇಕ ಮಾಧ್ಯಮ ಕ್ಷೇತ್ರವನ್ನು ರಾಜಕಾರಣಿಗಳು ಆವರಿಸಿಕೊಂಡಿದ್ದಾರೆ. ಹಾಗಾಗಿ ಅವರು ತಮ್ಮ ಮೂಗಿನ ನೇರಕ್ಕೆ ಸುದ್ದಿಗಳನ್ನು ಜನರಿಗೆ ತಲುಪಿಸಿ ಸುಳ್ಳನ್ನು ಸತ್ಯವಾಗಿಸುತ್ತಿದ್ದಾರೆ. ರಾಜಕಾರಣಿಗಳು ಕೂಡ ಒಂದೇ ವರ್ಷ ರೈತರಂತೆ ಬೆಳೆ ಬೆಳೆದು ತೋರಿಸಿದರೆ ಕೃಷಿ ಕ್ಷೇತ್ರದ ಸಮಸ್ಯೆಗಳು ಅವರ ಅರಿವಿಗೆ ಬರುತ್ತವೆ ಎಂದರು.
ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ಚನಹಳ್ಳಿ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 3 ತಿಂಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಗಳ ಬಗ್ಗೆ ಜನರಿಗೆ ತಿಳುವಳಿಕೆ ಇಲ್ಲ. ಹೊಸ ಕಾಯ್ದೆ ಗಳಿಂದ ರೈತರಿಗೆ ಆಗುವ ಅನಾನೂಕೂಲಗಳ ಏನು ? ಭವಿಷ್ಯದಲ್ಲಿ ಕೃಷಿ ಕ್ಷೇತ್ರದ ಮೇಲೆ ಅದರಿಂದ ಉಂಟಾಗುವ ಪರಿಣಾಮಗಳು ಏನು, ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವುದರ ಹಿಂದಿರುವ ಉದ್ದೇಶ ಏನು ಎನ್ನುವುದರ ಬಗ್ಗೆ ತಿಳುವಳಿಕೆ ಮೂಡಿಸುವ ಸಲುವಾಗಿ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಪ್ರಧಾನ ಕಾರ್ಯದರ್ಶಿ ಗುಮ್ಮನೂರು ಬಸವರಾಜ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮರಿಯಮ್ಮನಹಳ್ಳಿ ಪರಶುರಾಮ್, ಖಾಜಿ ನಿಯಾಜ್,ಮಲ್ಲಶೆಟ್ಟಿಹಳ್ಳಿ ಪ್ರಕಾಶ್, ಚಿರಂಜೀವಿ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ತಾಲೂಕುಗಳ ನೂರಕ್ಕೂ ಅಧಿಕ ರೈತರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ಹುಚ್ಚವ್ವನಹಳ್ಳಿ ಪ್ರಕಾಶ್ ನಿರೂಪಿಸಿದರು.







