ಜಮ್ಮು ಕಾಶ್ಮೀರದ ಬಗ್ಗೆ ವಿಶಸ್ವಸಂಸ್ಥೆ ಪ್ರತಿನಿಧಿಗಳ ಟೀಕೆ ಅನುಚಿತ ಮತ್ತು ತಿರಸ್ಕಾರ ಯೋಗ್ಯ: ಭಾರತ
ಹೊಸದಿಲ್ಲಿ, ಫೆ.19: ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಭಾಗವಾಗಿದೆ ಎಂದು ಒತ್ತಿಹೇಳಿರುವ ಭಾರತ, ಜಮ್ಮು-ಕಾಶ್ಮೀರದ ಕುರಿತ ಕಾರ್ಯನೀತಿಯ ಬಗ್ಗೆ ವಿಶ್ವಸಂಸ್ಥೆ ವಿಶೇಷ ಪ್ರತಿನಿಧಿಗಳ ಟೀಕೆ ಅನುಚಿತ , ಆಕ್ಷೇಪಾರ್ಹ ಮತ್ತು ತಿರಸ್ಕಾರ ಯೋಗ್ಯವಾಗಿದೆ ಎಂದು ಹೇಳಿದೆ. ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವುದನ್ನು ಟೀಕಿಸಿ ವಿಶ್ವಸಂಸ್ಥೆಯ ಅಲ್ಪಸಂಖ್ಯಾತರ ವಿಷಯದ ವಿಶೇಷ ಪ್ರತಿನಿಧಿ ಫೆರ್ನಾಂಡ್ ಡಿ ವರೆನ್ನೆಸ್ ಮತ್ತು ಧಾರ್ಮಿಕ ಸ್ವಾತಂತ್ರ ವಿಷಯದ ವಿಶೇಷ ಪ್ರತಿನಿಧಿ ಅಹ್ಮದ್ ಶಾಹೀದ್ ನೀಡಿರುವ ಹೇಳಿಕೆಗೆ ಭಾರತ ಈ ಪ್ರತಿಕ್ರಿಯೆ ನೀಡಿದೆ. ವಿಶೇಷ ಪ್ರತಿನಿಧಿಗಳ ಹೇಳಿಕೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ಹೈಕಮಿಷನರ್ ಅವರ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಪತ್ರಿಕಾ ಹೇಳಿಕೆಯ ಭಾಗವಾಗಿದೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ಅನುರಾಗ್ ಶ್ರೀವಾಸ್ತವ, ಜಮ್ಮು ಕಾಶ್ಮೀರಕ್ಕೆ ವಿದೇಶಿ ರಾಯಭಾರಿಗಳ ತಂಡದ ಭೇಟಿಯ ಸಂದರ್ಭದಲ್ಲೇ ಉದ್ದೇಶಪೂರ್ವಕವಾಗಿ ಈ ಹೇಳಿಕೆ ಹೊರಬಿದ್ದಿದೆ ಎಂದಿದ್ದಾರೆ. ‘ಜಮ್ಮು ಕಾಶ್ಮೀರವು ಭಾರತದ ಅವಿಭಾಜ್ಯ ಭಾಗವಾಗಿದ್ದು ಜಮ್ಮು ಕಾಶ್ಮೀರ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿ ಬದಲಾಯಿಸುವ ನಿರ್ಣಯವನ್ನು ಭಾರತದ ಸಂಸತ್ತು ಅನುಮೋದಿಸಿದೆ ಎಂಬುದನ್ನು ಪತ್ರಿಕಾ ಹೇಳಿಕೆ ನಿರ್ಲಕ್ಷಿಸಿದೆ. ದಶಕಗಳ ಕಾಲದ ತಾರತಮ್ಯವನ್ನು ಕೊನೆಗೊಳಿಸುವ, ಜಿಲ್ಲಾಭಿವೃದ್ಧಿ ಸಮಿತಿಗಳಿಗೆ ಚುನಾವಣೆ ನಡೆಸಿ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ತಳಮಟ್ಟದಲ್ಲಿ ಗಟ್ಟಿಗೊಳಿಸುವ , ಉತ್ತಮ ಆಡಳಿತವ್ಯವಸ್ಥೆ ನೆಲೆಗೊಳಿಸುವ ಉದ್ದೇಶ ಈ ಕ್ರಮದ ಹಿಂದಿದೆ ಎಂಬುದನ್ನು ಗಮನಿಸಲೂ ವಿಫಲವಾಗಿದೆ. ದೇಶದ ಇತರೆಡೆ ಅನ್ವಯವಾಗುವ ಕಾನೂನನ್ನು ಜಮ್ಮು ಕಾಶ್ಮೀರಕ್ಕೂ ವಿಸ್ತರಿಸುವುದರಿಂದ ಆಗುವ ಸಕಾರಾತ್ಮಕ ಪರಿಣಾಮಗಳನ್ನು ಈ ಹೇಳಿಕೆ ಕಡೆಗಣಿಸಿದೆ.
ಈ ಹೇಳಿಕೆ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿಗಳಿಗೆ ಇರಬೇಕಾದ ವಸ್ತುನಿಷ್ಟತೆ ಮತ್ತು ತಟಸ್ಥತೆಯ ತತ್ವಗಳ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿದೆ’ ಎಂದು ಶ್ರೀವಾಸ್ತವ ಹೇಳಿದ್ದಾರೆ.
ವಿಶೇಷ ಪ್ರತಿನಿಧಿಗಳು ಅವಸರದ ತೀರ್ಮಾನಕ್ಕೆ ಬರುವ ಹಾಗೂ ಹೇಳಿಕೆಗಳನ್ನು ನೀಡುವ ಮೊದಲು, ಪರಿಗಣನೆಯಲ್ಲಿರುವ ವಿಷಯದ ಬಗ್ಗೆ ಉತ್ತಮ ತಿಳುವಳಿಕೆ ಹೊಂದಿರಬೇಕು ಎಂದು ನಾವು ಅಪೇಕ್ಷಿಸುತ್ತೇವೆ. ವಿಶೇಷ ಪ್ರತಿನಿಧಿಗಳು ಫೆಬ್ರವರಿ 10ರಂದು ತಮ್ಮ ಪ್ರಶ್ನಾವಳಿಯನ್ನು ಹಂಚಿಕೊಂಡ ಬಳಿಕ ನಮ್ಮ ಪ್ರತಿಕ್ರಿಯೆಗೂ ಕಾಯದೆ ತಮ್ಮ ತಪ್ಪು ಊಹೆಯನ್ನು ಮಾಧ್ಯಮದಲ್ಲಿ ಬಿಡುಗಡೆ ಮಾಡಿರುವುದು ಶೋಚನೀಯ ಎಂದು ಶ್ರೀವಾಸ್ತವ ಹೇಳಿದ್ದಾರೆ. ವಿಶ್ವಸಂಸ್ಥೆಯ ಮಾನವಹಕ್ಕುಗಳ ಹೈಕಮಿಷನರ್‌ರ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿರುವ ಹೇಳಿಕೆಯಲ್ಲಿ ‘ಜಮ್ಮು-ಕಾಶ್ಮೀರದ ಸ್ವಾಯತ್ತತೆಯನ್ನು ಕೊನೆಗೊಳಿಸಿ, ಅಲ್ಲಿ ಮುಸ್ಲಿಮರು ಹಾಗೂ ಇತರ ಹಿಂದುಳಿದ ವರ್ಗದವರಿಗೆ ರಾಜಕೀಯ ಕ್ಷೇತ್ರದಲ್ಲಿ ಈ ಹಿಂದೆ ಇದ್ದ ರೀತಿಯ ಅವಕಾಶವನ್ನು ಮೊಟಕುಗೊಳಿಸುವ ಹೊಸ ಕಾಯ್ದೆ ಜಾರಿಗೆ ತಂದಿರುವುದು ಆತಂಕಕಾರಿ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ’ ಎಂದು ಉಲ್ಲೇಖಿಸಲಾಗಿದೆ.







