ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡಿದಿದ್ದರೆ ಬೆಂಕಿ ಹಚ್ಚುತ್ತೇವೆ: ಕುರುಬ ಮುಖಂಡ ಎಚ್ಚರಿಕೆ
ಬೆಂಗಳೂರು, ಫೆ.19: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ(ಎಸ್ಟಿ) ಮೀಸಲಾತಿಗೆ ಸೇರ್ಪಡೆ ಮಾಡಿಕೊಳ್ಳದಿದ್ದರೆ ರಾಜ್ಯದಲ್ಲಿ ಬೆಂಕಿ ಬೀಳುತ್ತದೆ ಎಂದು ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಹಾಗೂ ಎಸ್ಟಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಸಣ್ಣಕ್ಕಿ ಎಚ್ಚರಿಕೆ ನೀಡಿದ್ದಾರೆ.
ಪ್ರದೇಶ ಕುರುಬರ ಸಂಘ ನಗರದ ಶೇಷಾದ್ರಿ ರಸ್ತೆಯಲ್ಲಿ ಗಾಂಧಿ ಪ್ರತಿಮೆ ಬಳಿ ಕುರುಬರ ಎಸ್ಟಿ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ನಡೆಸಿರುವ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಕುರುಬ ಸಮಾಜದವರಿಗೆ ಕೆಲ ಜಿಲ್ಲೆಗಳಲ್ಲಿ ಎಸ್ಟಿ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಅದೇ ರೀತಿಯಾಗಿ ಎಲ್ಲ ಜಿಲ್ಲೆಗಳಲ್ಲಿರುವ ಕುರುಬರಿಗೆ ಎಸ್ಟಿ ಮೀಸಲಾತಿ ಕಲ್ಪಿಸಬೇಕು. ಈ ಹಿನ್ನೆಲೆಯಲ್ಲಿ ಕುರುಬರನ್ನು ಎಸ್ಟಿಗೆ ಪಟ್ಟಿಗೆ ಸೇರಿಸಿ ಶಿಫಾರಸನ್ನು ರಾಜ್ಯ ಸರಕಾರ ಕೇಂದ್ರಕ್ಕೆ ಕಳುಹಿಸಬೇಕು. ಕುರುಬರಿಗೆ ಎಸ್ಟಿ ಮೀಸಲಾತಿ ಸಿಗದಿದ್ದರೆ ಬೆಂಕಿ ಹಚ್ಚುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುರುಬರ ಎಸ್ಟಿ ಹೋರಾಟ ಬಹುದಿನಗಳ ಕನಸಾಗಿದ್ದು, ಸರಕಾರ ಈಗಲಾದರೂ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಅವರು ಹೇಳಿದರು.
ಬಿಬಿಎಂಪಿ ಮಾಜಿ ಮೇಯರ್ ಡಿ.ವೆಂಕಟೇಶಮೂರ್ತಿ ಮಾತನಾಡಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ್ ವರದಿಯನ್ನು ಜಾರಿ ಮಾಡಬೇಕು ಎಂದು ಹೇಳಿದರು.
ಹಾಗೆಯೇ ಹಿಂದುಳಿದ ವರ್ಗಗಳ ಸಿಂಧುತ್ವ ಪ್ರಮಾಣ ಪತ್ರವನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ವಾಪಸ್ ಪಡೆದು ಜಿಲ್ಲಾಧಿಕಾರಿಗಳಿಗೆ ಸಿಂಧುತ್ವ ಪ್ರಮಾಣ ಪತ್ರ ನೀಡುವ ಅಧಿಕಾರ ನೀಡಬೇಕು ಎಂಬ ಬೇಡಿಕೆಗಳನ್ನು ಇಟ್ಟುಕೊಂಡು ಪ್ರದೇಶ ಕುರುಬ ಸಂಘ ಈ ಪ್ರತಿಭಟನೆ ನಡೆಸಿದೆ ಎಂದರು.
ಪ್ರದೇಶ ಕುರುಬರ ಸಂಘ ಇಂದು ಸಾಂಕೇತಿಕವಾಗಿ ಧರಣಿ ನಡೆಸಿದೆ. ಬೇಡಿಕೆ ಈಡೇರಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಮಾಜಿ ಮೇಯರ್ ಡಿ. ವೆಂಕಟೇಶ್‍ಮೂರ್ತಿ ಹೇಳಿದರು.
ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ.ಸುಬ್ರಹ್ಮಣ್ಯ, ಕುರುಬರ ಸಂಘದ ಪದಾಧಿಕಾರಿಗಳು, ಮುಖಂಡರು ಹಾಗೂ ಸಮುದಾಯದ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
2ಎ ಮೀಸಲಾತಿಯನ್ನು ಮುಂದುವರಿದ ಜಾತಿಗಳಿಗೆ ನೀಡಬೇಡಿ
‘ಕುರುಬರ ಅಭಿವೃದ್ಧಿ ನಿಗಮ ಸ್ಥಾಪಿಸಿ, 400 ಕೋಟಿ ರೂ.ಗಳನ್ನು ಕಾಯ್ದಿರಿಸಬೇಕು. 2ಎ ಮೀಸಲಾತಿ ಪಟ್ಟಿಗೆ ಯಾವುದೇ ಮುಂದುವರಿದ ಜಾತಿಗಳನ್ನು ಸೇರ್ಪಡೆ ಮಾಡಬಾರದು,’
-ಡಿ.ವೆಂಕಟೇಶ್‍ಮೂರ್ತಿ, ಬಿಬಿಎಂಪಿ ಮಾಜಿ ಮೇಯರ್







