ಒಂದೂವರೆ ವರ್ಷದ ಮಗುವನ್ನು ಅಪಹರಿಸಿ ಕೊಲೆ: ಆರೋಪಿ ತಂದೆಗೆ ಮರಣದಂಡನೆ ಶಿಕ್ಷೆ

ಗದಗ, ಫೆ.19: ಒಂದೂವರೆ ವರ್ಷದ ಮಗುವನ್ನೇ ಕತ್ತು ಹಿಸುಕಿ ಹತ್ಯೆ ಮಾಡಿದ್ದ ತಂದೆಗೆ ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಹುಲ್ಲೂರ ಗ್ರಾಮದ ನಿವಾಸಿ ಪ್ರಶಾಂತಗೌಡ ಮಹಿಳೆಯೊಬ್ಬರನ್ನು ಪ್ರೀತಿಸಿ ಮದುವೆಯಾಗಿದ್ದ. ಇವರಿಬ್ಬರ ಪ್ರೀತಿ ಫಲವಾಗಿ ಮಗುವಿನ ಜನನವಾಗಿತ್ತು. ಆದರೆ, ಪತಿ- ಪತ್ನಿಯ ಮಧ್ಯೆ ಮನಸ್ತಾಪ ಉಂಟಾಗಿದ್ದರಿಂದ ಇಬ್ಬರೂ ಬೇರೆ ಬೇರೆಯಾಗಿದ್ದರು.
ನೊಂದ ಮಹಿಳೆ ಜೀವನಾಂಶ ಬೇಡಿ ಕೋರ್ಟ್ ಮೊರೆ ಹೋಗಿದ್ದರು. ಇದರಿಂದ, ಕೋಪಗೊಂಡಿದ್ದ ಆರೋಪಿ ಪ್ರಶಾಂತಗೌಡ 2015ರ ಎ.6ರಂದು ತನ್ನ ಸ್ವಂತ ಮಗುವನ್ನೇ ಅಪಹರಿಸಿ ರೋಣ ತಾಲೂಕಿನ ಗಜೇಂದ್ರಗಡ ಪಣ್ಣದ ಕಾಲಕಾಲೇಶ್ವರ ಗುಡ್ಡಕ್ಕೆ ಕರೆದುಕೊಂಡು ಹೋಗಿ ಕತ್ತುಹಿಸುಕಿ ಹತ್ಯೆ ಮಾಡಿ ಬಳಿಕ ಮೃತದೇಹ ಸುಟ್ಟು ಹಾಕಿದ್ದರ ಬಗ್ಗೆ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗಿದೆ.
ಸುಧೀರ್ಘ ವಿಚಾರಣೆ ಬಳಿಕ ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಜಶೇಖರ ವಿ. ಪಾಟೀಲ್, ಆರೋಪಿಗೆ ಮರಣದಂಡನೆಯ ತೀರ್ಪು ನೀಡಿ ಆದೇಶಿಸಿದ್ದಾರೆ.





