ಗೋಹತ್ಯೆಯನ್ನು ನರಹತ್ಯೆಗೆ ಸಮಾನವೆಂದು ಪರಿಗಣಿಸಿ: ಕೇಂದ್ರ ಸಚಿವ ಸಾರಂಗಿ

ಹೊಸದಿಲ್ಲಿ, ಫೆ. 19: ಗೋಹತ್ಯೆಯನ್ನು ನರಹತ್ಯೆಗೆ ಸಮಾನವಾದ ಅಪರಾಧವೆಂದು ಪರಿಗಣಿಸುವಂತೆ ಗುರುವಾರ ಆಗ್ರಹಿಸಿರುವ ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ, ಅಪರಾಧಿಗಳಿಗೆ ಕನಿಷ್ಠ 15 ವರ್ಷಗಳ ಕಠಿಣ ಶಿಕ್ಷೆ ವಿಧಿಸಬೇಕು ಎಂದಿದ್ದಾರೆ.
2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಾಲಸೋರೆ ಕ್ಷೇತ್ರದಲ್ಲಿ 64 ವರ್ಷದ ಸಾರಂಗಿ ಅವರು ವಿಜಯ ಗಳಿಸಿದ್ದರು. ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ ಅವರು ಎರಡು ಬಾರಿ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮ ಹಾಗೂ ಪಶು ಸಂಗೋಪನೆ, ಹೈನುಗಾರಿಕೆ ಹಾಗೂ ಮೀನುಗಾರಿಕೆಯ ಸಹಾಯಕ ಸಚಿವರಾಗಿದ್ದರು. ಬಾಲಸೋರೆಯಲ್ಲಿ ನಡೆದ ಟ್ರಕ್ ಅಪಘಾತದ ಪರಿಣಾಮ ಅದರಲ್ಲಿ ಸಾಗಿಸಲಾಗುತ್ತಿದ್ದ 28 ಜಾನುವಾರುಗಳು ಮೃತಪಟ್ಟ ಬಗ್ಗೆ ಹೊಸದಿಲ್ಲಿಯಲ್ಲಿರುವ ತನ್ನ ನಿವಾಸದಲ್ಲಿ ಗುರುವಾರ ಮಾತನಾಡಿದ್ದ ಸಾರಂಗಿ, ‘‘ನಾನು ಇಂದು ಬೆಳಗ್ಗೆ ಕೊಲ್ಕತ್ತಾದಲ್ಲಿ ಇರುವಾಗ ಈ ಸುದ್ದಿ ಕೇಳಿದೆ. ಈ ಬಗ್ಗೆ ಒಡಿಶಾದಲ್ಲಿರುವ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಜಾನುವಾರುಗಳನ್ನು ಕೋಲ್ಕತ್ತಾದಿಂದ ಬಾಂಗ್ಲಾದೇಶಕ್ಕೆ ಕೊಂಡೊಯ್ಯಲಾಗುತ್ತಿತ್ತು ಎಂದು ದೃಢವಾಗಿ ಹೇಳಬಲ್ಲೆ’’ ಎಂದಿದ್ದರು.
ಈ ಬಗ್ಗೆ ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಪತ್ರ ಬರೆದಿರುವ ಸಾರಂಗಿ, 1960ರ ಒರಿಸ್ಸಾ ಗೋ ಹತ್ಯೆ ತಡೆ ಕಾಯ್ದೆಗೆ ತಿದ್ದುಪಡಿ ತರುವಂತೆ ಆಗ್ರಹಿಸಿದ್ದಾರೆ.







