ಟೆಕ್ಸಾಸ್‌ನ ಭೀಕರ ಚಳಿಗೆ ಹವಾಮಾನ ಬದಲಾವಣೆ ಕಾರಣ: ಶ್ವೇತಭವನ

ವಾಶಿಂಗ್ಟನ್, ಫೆ. 19: ಅಮೆರಿಕದ ಟೆಕ್ಸಾಸ್ ಮತ್ತು ಅದರ ಸುತ್ತಮುತ್ತಲಿನ ರಾಜ್ಯಗಳನ್ನು ಆವರಿಸಿರುವ ಭೀಕರ ಶೀತಮಾರುತವು ಹವಾಮಾನ ಬದಲಾವಣೆಯ ಪರಿಣಾಮವಾಗಿದೆ ಎಂದು ಅವೆುರಿಕ ಸರಕಾರ ಹೇಳಿದೆ. ಅದೇ ವೇಳೆ, ಹಸಿರು ಇಂಧನದಿಂದಾಗಿ ವ್ಯಾಪಕ ವಿದ್ಯುತ್ ವೈಫಲ್ಯ ಉಂಟಾಗಿದೆ ಎಂಬ ಟೆಕ್ಸಾಸ್ ರಾಜ್ಯ ಸರಕಾರದ ಅಭಿಪ್ರಾಯವನ್ನು ಅದು ತಿರಸ್ಕರಿಸಿದೆ.
ಅಮೆರಿಕದ ಅತಿ ದೊಡ್ಡ ತೈಲ ಮತ್ತು ಅನಿಲ ಉತ್ಪಾದಕ ರಾಜ್ಯವಾಗಿರುವ ಟೆಕ್ಸಾಸ್‌ನಲ್ಲಿ ತಲೆದೋರಿರುವ ಪ್ರಾಕೃತಿಕ ಬಿಕ್ಕಟ್ಟಿನ ವಿಷಯದಲ್ಲಿ ರಿಪಬ್ಲಿಕ್ ಪಕ್ಷದ ಟೆಕ್ಸಾಸ್ ಗವರ್ನರ್ ಗ್ರೆಗ್ ಅಬಾಟ್ ಮತ್ತು ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್‌ರ ಶ್ವೇತಭವನದ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿದೆ.
ಬೈಡನ್‌ರ ಚುನಾವಣಾ ವಿಜಯವನ್ನು ಆರಂಭದಲ್ಲಿ ಗ್ರೆಗ್ ಅಬಾಟ್ ಅಂಗೀಕರಿಸಿರಲಿಲ್ಲ.
ಹಿಮ ಬಿರುಗಾಳಿಯಿಂದಾಗಿ 10 ಲಕ್ಷಕ್ಕಿಂತಲೂ ಅಧಿಕ ಜನರು ಈಗಲೂ ವಿದ್ಯುತ್ ವೈಫಲ್ಯವನ್ನು ಎದುರಿಸುತ್ತಿದ್ದಾರೆ ಹಾಗೂ ಇದಕ್ಕೆ ಹವಾಮಾನ ಬದಲಾವಣೆ ಕಾರಣ ಎಂದು ಶ್ವೇತಭವನದ ಆಂತರಿಕ ಭದ್ರತಾ ಸಲಹೆಗಾರ್ತಿ ಲಿಝ್ ಶೆರ್ವುಡ್ ರಾಂಡಲ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.





