ತಮಿಳುನಾಡು:ಸಿಎಎ ಪ್ರತಿಭಟನಾಕಾರರ ವಿರುದ್ಧದ ಪ್ರಕರಣಗಳು ವಾಪಸ್

ತೆಂಕಾಶಿ,ಫೆ.19: ಕೋವಿಡ್-19 ನಿಯಮಾವಳಿಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ದಾಖಲಾಗಿರುವ ಸುಮಾರು 10 ಲಕ್ಷ ಪ್ರಕರಣಗಳು ಮತ್ತು ಸಿಎಎ ಪ್ರತಿಭಟನಾಕಾರರ ವಿರುದ್ಧದ ಪ್ರಕರಣಗಳನ್ನು ಹಿಂದೆಗೆದುಕೊಳ್ಳಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ಅವರು ಶುಕ್ರವಾರ ಇಲ್ಲಿ ಪ್ರಕಟಿಸಿದರು.
ಹಿಂಸಾಚಾರ,ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮತ್ತು ಲಾಕ್‌ಡೌನ್ ಸಂದರ್ಭ ಇ-ಪಾಸ್ ಪಡೆಯಲು ನಕಲಿ ದಾಖಲೆಗಳ ಬಳಕೆಗೆ ಸಂಬಂಧಿಸಿದಂತಹ ಪ್ರಕರಣಗಳನ್ನು ಹೊರತುಪಡಿಸಿ ಇತರ ಎಲ್ಲ ಪ್ರಕರಣಗಳನ್ನು ವಾಪಸ್ ಪಡೆಯಲಾಗುವುದು ಎಂದರು.
ಎಪ್ರಿಲ್‌ನಲ್ಲಿ ನಡೆಯುವ ನಿರೀಕ್ಷೆಯಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಇಲ್ಲಿಗೆ ಸಮೀಪದ ಕಡಯನಲ್ಲೂರಿನಲ್ಲಿ ಸಭೆಯಲ್ಲಿ ಮಾತನಾಡುತ್ತಿದ್ದ ಪಳನಿಸ್ವಾಮಿ,ಲಾಕ್‌ಡೌನ್ ಮತ್ತು ಕೋವಿಡ್-19 ನಿಯಮಾವಳಿಗಳ ಉಲ್ಲಂಘನೆಗಾಗಿ 10 ಲಕ್ಷ ಪ್ರಕರಣಗಳು ಹಾಗೂ ಮತಪ್ರದರ್ಶನಗಳು, ನಿಷೇಧಾಜ್ಞೆಗಳ ಉಲ್ಲಂಘನೆ,ಸಾರ್ವಜನಿಕ ಆಸ್ತಿಗೆ ನಷ್ಟ ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಕ್ಕಾಗಿ ಸಿಎಎ ವಿರೋಧಿ ಪ್ರತಿಭಟನೆಗಳ ಸಂದರ್ಭ ಸುಮಾರು 1,500 ಪ್ರಕರಣಗಳು ದಾಖಲಾಗಿವೆ ಎಂದರು. ಕುಡಂಕುಳಂ ಪರಮಾಣು ವಿದ್ಯುತ್ ಸ್ಥಾವರದ ವಿರುದ್ಧ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದವರ ವಿರುದ್ಧದ ಪ್ರಕರಣಗಳ ಹಿಂದೆಗೆತಕ್ಕೆ ಜನತೆಯ ಮನವಿಯನ್ನು ಉಲ್ಲೇಖಿಸಿದ ಅವರು,ಈಗಾಗಲೇ ಹಲವಾರು ಪ್ರಕರಣಗಳನ್ನು ರದ್ದುಗೊಳಿಸಲಾಗಿದೆ. ಕೆಲವು ಪ್ರಕರಣಗಳು ನ್ಯಾಯಾಲಯಗಳಲ್ಲಿವೆ ಮತ್ತು ಇನ್ನು ಕೆಲವು ಎಫ್‌ಐಆರ್ ಹಂತದಲ್ಲಿವೆ. ಜನರ ಕೋರಿಕೆಯನ್ನು ಕಾನೂನಿಗನುಗುಣವಾಗಿ ಸಕಾರಾತ್ಮಕವಾಗಿ ಪರಿಗಣಿಸಲಾಗುವುದು ಎಂದರು.







