'ದಿಲ್ಲಿ ಪೊಲೀಸರಿಂದ ದಿಶಾ ರವಿ ಅಕ್ರಮ ಬಂಧನ': ತನಿಖೆ ನಡೆಸಲು ಆಗ್ರಹಿಸಿ ಗೃಹ ಸಚಿವರಿಗೆ ಪಿಯುಸಿಎಲ್ ಮನವಿ

ಬೆಂಗಳೂರು, ಫೆ. 19: ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ದಿಲ್ಲಿ ಪೊಲೀಸರ ಅಕ್ರಮ ಬಂಧನದ ಕುರಿತು ತನಿಖೆ ನಡೆಸಲು ಕೇಂದ್ರ ಸರಕಾರಕ್ಕೆ ಮನವಿ ಮಾಡಬೇಕು. ಅಲ್ಲದೆ, ಅವರ ಬಿಡುಗಡೆಗೆ ಕ್ರಮ ವಹಿಸುವುದರ ಜೊತೆಗೆ ಅವರ ಕುಟುಂಬದೊಂದಿಗೆ ನಿಲ್ಲಬೇಕು ಎಂದು ಕೋರಿ ಪೀಪಲ್ಸ್ ಯುನಿಯನ್ ಫಾರ್ ಸಿವಿಲ್ ಲಿಬರ್ಟಿಸ್(ಪಿಯುಸಿಎಲ್) ನೇತೃತ್ವದ ವಿವಿಧ ಸಂಘಟನೆಗಳ ನಿಯೋಗ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದೆ.
ಶುಕ್ರವಾರ ಇಲ್ಲಿನ ಆರ್.ಟಿ.ನಗರದಲ್ಲಿರುವ ಗೃಹ ಸಚಿವರ ನಿವಾಸಕ್ಕೆ ತೆರಳಿದ ಮುಖಂಡರ ನಿಯೋಗ, ದಿಲ್ಲಿ ಪೊಲೀಸರ ಅಕ್ರಮ ಬಂಧನ ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಗೆ ಧಕ್ಕೆ, ವಾಕ್ ಸ್ವಾತಂತ್ರ್ಯದ ಮೇಲಿನ ದಾಳಿಯೂ ಆಗಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಸರಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಿದೆ.
ಎಫ್‍ಐಆರ್ ದಾಖಲಿಸಿ: ದಿಶಾ ರವಿ ಅವರ ಕೊಲೆಗೆ ಟ್ವಿಟ್ಟರ್ ಮೂಲಕ ಕರೆ ನೀಡಿದ ಹರಿಯಾಣದ ಸಚಿವ ಅನಿಲ್ ವಿಝ್ ವಿರುದ್ಧ ಕೂಡಲೇ ಎಫ್‍ಐಆರ್ ದಾಖಲಿಸಬೇಕು. ದಿಲ್ಲಿ ಪೊಲೀಸರು ರಾಜ್ಯದ ಯುವತಿಯನ್ನು ಪೊಲೀಸರಿಗೆ ಮಾಹಿತಿ ನೀಡದೆ ಬಂಧಿಸಿದ್ದು, ವಕೀಲರೊಂದಿಗೆ ಸಮಾಲೋಚಿಸಲು ಅವಕಾಶ ನೀಡಿಲ್ಲ. ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸದೆ ದಿಲ್ಲಿಗೆ ಕರೆದೊಯ್ದಿರುವುದು ರಾಜ್ಯದ ಜನರಿಗೆ ಅತೀವ ನೋವು ತಂದಿದೆ ಎಂದು ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.
ಭರವಸೆ: ದಿಶಾ ರವಿ ಅಕ್ರಮ ಬಂಧನಕ್ಕೆ ಸಂಬಂಧಿಸಿದಂತೆ ಒಂದೆರಡು ದಿನಗಳಲ್ಲಿ ರಾಜ್ಯದ ಅಡ್ವೊಕೇಟ್ ಜನರಲ್ ಅವರೊಂದಿಗೆ ಚರ್ಚಿಸಲಾಗುವುದು. ಅಲ್ಲದೆ, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮ ವಹಿಸಲಾಗುವುದು ಎಂದು ಸಚಿವ ಬಸವರಾಜ ಬೊಮ್ಮಾಯಿ, ಪಿಯುಸಿಎಲ್ ನಿಯೋಗಕ್ಕೆ ಭರವಸೆ ನೀಡಿದ್ದಾರೆಂದು ತಿಳಿಸಲಾಗಿದೆ.
ನಿಯೋಗದಲ್ಲಿ ಹಸಿರು ಸೇನೆ, ಎಐಯುಟಿಯುಸಿ, ಪ್ರಗತಿಪರ ಮಹಿಳಾ ಸಂಘಟನೆಯ ಪದಾಧಿಕಾರಿಗಳು, ಮುಖಂಡರಾದ ವಿನಯ್, ನರಸಿಂಹಮೂರ್ತಿ, ತನ್ವಿರ್, ತೇಜಸ್ ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.







