ಜಮ್ಮು-ಕಾಶ್ಮೀರದಲ್ಲಿನ ರಕ್ತಪಾತ ನಿಲ್ಲಲು ಪಾಕಿಸ್ತಾನದೊಂದಿಗೆ ಮಾತುಕತೆ ಆರಂಭಿಸಿ: ಮೆಹಬೂಬಾ ಮುಫ್ತಿ
“ಇಲ್ಲಿಯ ಖಬರಸ್ತಾನ್‌ಗಳು ತುಂಬಿಹೋಗಿವೆ”

ಶ್ರೀನಗರ,ಫೆ.20: ಪಾಕಿಸ್ತಾನದೊಂದಿಗೆ ಮಾತುಕತೆಗಳನ್ನು ಆರಂಭಿಸುವಂತೆ ಮತ್ತು ಜಮ್ಮು-ಕಾಶ್ಮೀರದಲ್ಲಿ ಹಿಂಸಾಚಾರ ನಡೆಯದಂತೆ ನೋಡಿಕೊಳ್ಳಲು ಸ್ಥಳೀಯ ಜನತೆಯನ್ನೂ ಮಾತುಕತೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಅವರು ಶನಿವಾರ ಕೇಂದ್ರವನ್ನು ಆಗ್ರಹಿಸಿದರು. ಶುಕ್ರವಾರ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ಘಟನೆಗಳಲ್ಲಿ ಮೂವರು ಪೊಲೀಸರು ಕೊಲ್ಲಲ್ಪಟ್ಟಿರುವ ಬೆನ್ನಿಗೇ ಮುಫ್ತಿಯವರ ಈ ಹೇಳಿಕೆ ಹೊರಬಿದ್ದಿದೆ.
ಅನಂತನಾಗ್ ಜಿಲ್ಲೆಯ ಲೋಗ್ರಿಪೋರ ಐಷ್‌ಮುಕಾಮ್‌ಗೆ ಭೇಟಿ ನೀಡಿದ ಮುಫ್ತಿ, ಶ್ರೀನಗರದ ಬಾಘತ್ ಪ್ರದೇಶದಲ್ಲಿ ಶುಕ್ರವಾರ ಭಯೋತ್ಪಾದಕ ದಾಳಿಯಲ್ಲಿ ಕೊಲ್ಲಲ್ಪಟ್ಟ ಜಮ್ಮು-ಕಾಶ್ಮೀರ ಪೊಲೀಸ್ ಕಾನ್‌ಸ್ಟೇಬಲ್ ಸುಹೈಲ್ ಅಹ್ಮದ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಬಾಘತ್ ದಾಳಿಯಲ್ಲಿ ಅಹ್ಮದ್ ಜೊತೆ ಇನ್ನೋರ್ವ ಪೊಲೀಸ್ ಸಿಬ್ಬಂದಿ ಕೂಡ ಮೃತಪಟ್ಟಿದ್ದಾರೆ. ಪ್ರತ್ಯೇಕ ಘಟನೆಯಲ್ಲಿ ಬುಡ್ಗಾಂವ್ ಜಿಲ್ಲೆಯಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಇನ್ನೋರ್ವ ಪೊಲೀಸ್ ಸಿಬ್ಬಂದಿ ಕೊಲ್ಲಲ್ಪಟ್ಟಿದ್ದಾರೆ. ಶುಕ್ರವಾರ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಬಡಿಗ್ರಾಮದಲ್ಲಿ ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ ಮೂವರು ಭಯೋತ್ಪಾದಕರೂ ಬಲಿಯಾಗಿದ್ದಾರೆ.
ಜಮ್ಮು-ಕಾಶ್ಮೀರದ ಜನರು,ಪೊಲೀಸರು ಮತ್ತು ಯುವಜನರು ಎಲ್ಲಿಯವರಿಗೆ ತಮ್ಮ ಬಲಿದಾನಗಳನ್ನು ಮುಂದುವರಿಸಲು ಸಾಧ್ಯ ಎನ್ನುವುದರ ಬಗ್ಗೆ ಕೇಂದ್ರವು ಯೋಚಿಸಬೇಕು ಎಂದ ಮುಫ್ತಿ,ಪಾಕಿಸ್ತಾನ ಮತ್ತು ಈ ಕೇಂದ್ರಾಡಳಿತ ಪ್ರದೇಶದ ಜನರೊಂದಿಗೆ ಮಾತುಕತೆಗಳನ್ನು ನಡೆಸುವಂತೆ ಅದನ್ನು ಆಗ್ರಹಿಸಿದರು.
ಕಾಶ್ಮೀರ ಬಿಕ್ಕಟ್ಟು ಬೃಹತ್ ಸಮಸ್ಯೆಯಾಗಿದೆ ಮತ್ತು ಜಮ್ಮು-ಕಾಶ್ಮೀರದಲ್ಲಿ ರಕ್ತಪಾತ ನಿಲ್ಲುವಂತಾಗಲು ಮತ್ತು ಇಲ್ಲಿಯ ಜನರು ಶಾಂತಿಯಿಂದ ಬದುಕುವಂತಾಗಲು ಈ ಸಮಸ್ಯೆಯನ್ನು ಬಗೆಹರಿಸುವುದು ಅಗತ್ಯವಾಗಿದೆ ಎಂದರು. ಅಹ್ಮದ್ ಕುರಿತು ಮಾತನಾಡಿದ ಮುಫ್ತಿ,ಅವರು ಇಬ್ಬರು ಸಣ್ಣಮಕ್ಕಳನ್ನು ಅಗಲಿದ್ದಾರೆ,ಅಹ್ಮದ್‌ಗೆ ಕೇವಲ ನಾಲ್ಕು ವರ್ಷವಾಗಿದ್ದಾಗ ಅವರ ತಂದೆಯೂ ಕೊಲ್ಲಲ್ಪಟ್ಟಿದ್ದರು. ಈಗ ಅವರ ಕುಟುಂಬವೇನು ಮಾಡಬೇಕು ಎಂದು ಪ್ರಶ್ನಿಸಿದರು.
ಕೇಂದ್ರದ ಬಿಜೆಪಿ ಸರಕಾರವು ಆಲೋಚಿಬೇಕು ಮತ್ತು ಜಮ್ಮು-ಕಾಶ್ಮೀರದಲ್ಲಿ ರಕ್ತಪಾತ ನಿಲ್ಲುವಂತಾಗಲು ಪಾಕ್ ಜೊತೆ ಅಥವಾ ಸ್ಥಳೀಯ ಜನರೊಂದಿಗೆ ಮಾತುಕತೆಯನ್ನು ಆರಂಭಿಸಬೇಕು. ಇಲ್ಲಿಯ ಖಬರಸ್ತಾನ್‌ಗಳು ತುಂಬಿಹೋಗಿವೆ ಎಂದರು.







